ಹುಬ್ಬಳ್ಳಿ : ಸೆಲೆಬ್ರಿಟಿಗಳನ್ನು ಕರೆದುಕೊಂಡು ಬಂದು ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿದ್ರು. ನೂತನ ಸಂಸತ್ ಭವನ ಉದ್ಘಾಟನೆ ವೇಳೆ ರಾಷ್ಟ್ರಪತಿ ಎಲ್ಲಿದ್ರು?. ಆ ಮಹಿಳೆ ಆದಿವಾಸಿ, ವಿಧವೆ ಅನ್ನೋ ಕಾರಣಕ್ಕೆ ಅವರನ್ನು ಕರೆದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೌತ್ ಇಂಡಿಯನ್ ಹಿರೋಯಿನ್ಗಳನ್ನು ಕರೆದುಕೊಂಡು ಬಂದು ಮಹಿಳಾ ಬಿಲ್ ಪಾಸ್ ಮಾಡಿ ಪ್ರಚಾರ ತೆಗೆದುಕೊಂಡ್ರಿ. ರಾಷ್ಟ್ರಪತಿಯವರು ಮಹಿಳೆ ತಾನೆ. ಅವರನ್ನು ಯಾಕೆ ನೂತನ ಸಂಸತ್ ಭವನಕ್ಕೆ ಕರೆದುಕೊಂಡು ಬರಲಿಲ್ಲ. ಇದಕ್ಕೆ ಕಾರಣ ಹೇಳಬೇಕು ತಾನೆ?. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಮೊದಲ ಪ್ರಜೆ ಅಲ್ವಾ?. ಬಿಜೆಪಿಯರಿಗೆ ಎಂತಹ ಮನಸ್ಥಿತಿ ಇದೆ ನೋಡಿ. ಅದನ್ನು ಅವರು ಒಪ್ಪಿಕೊಳ್ಳಲ್ಲ. ಮಹಿಳಾ ಬಿಲ್ ಅದು ನಮ್ಮದೆ, ಅದಕ್ಕೆ ಹೊಸ ಹೆಸರು ಇಟ್ರು ಎಂದು ಹೇಳಿದರು.
ಕಾಂಗ್ರೆಸ್ನ ಡಿಎನ್ಎ ನಲ್ಲಿ ಚಿಲ್ಲರೆ ರಾಜಕಾರಣ ಇದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತಿಗೆ ತಿರುಗೇಟು ನೀಡಿದ ಸಂತೋಷ್ ಲಾಡ್, ಅವರ ನೋಟು ಎಲ್ಲಿ ಹೋಯ್ತು. 75 ವರ್ಷ ನಾವೇ ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ ಇವರು ನೋಟು ಮಾಡಿದ್ರು. ಇವರ ನೋಟು ಎಲ್ಲಿ ಹೋಯ್ತು. ನೀವು ಅವರನ್ನು 2000 ರೂ. ನೋಟು ಎಲ್ಲಿ ಹೋಯ್ತು ಎಂದು ಪ್ರಶ್ನೆ ಕೇಳಬೇಕು ಎಂದರು.