ಧಾರವಾಡ:ಜೆಡಿಎಸ್-ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸಿಲ್ಲ ಎಂಬ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೋನರಡ್ಡಿ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಕೆಲವು ಕಾರಣಗಳನ್ನು ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಿತ್ತು. ಅದನ್ನ ನಾವು ಬಹಳ ರಾಜಕೀಯಗೊಳಿಸುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ 90% ಮೈತ್ರಿ ಧರ್ಮ ಪಾಲನೆ ಆಗಿದೆ ಎಂದಿದ್ದಾರೆ.
ಒಂದೊಂದು ಕಡೆ, ಮಂಡ್ಯ, ಮೈಸೂರಿನಲ್ಲಿ ಸಮಸ್ಯೆ ಆಗಿದೆ. ಇಂತಹ ಸಣ್ಣಪುಟ್ಟ ಘಟನೆಗಳು ನಡೆದಿವೆ. ಮಂಡ್ಯದಲ್ಲಿ ನಾವು ಗೆದ್ದು ಬರುತ್ತೇವೆ. ಜಿ.ಟಿ.ದೇವೇಗೌಡರು ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ನಾನು ವಿನಯ್ ಕುಲಕರ್ಣಿಗೆ ಮತ ಹಾಕಿದ್ದೇನೆ ಎಂದು ಕೋನರೆಡ್ಡಿ ಹೇಳಿದ್ದಾರೆ..
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನಾರೋಗ್ಯ ಹಿನ್ನೆಲೆ ರೆಸ್ಟ್ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಪೂರ್ವದಲ್ಲಿ ನಿರಂತರವಾಗಿ ದುಡಿದಿದ್ದಾರೆ. ಮೊದಲೇ ಸಿಎಂ ಹೃದಯ ಚಿಕಿತ್ಸೆಗೆ ಒಳಗಾದವರು. ವೈದ್ಯರ ಸಲಹೆ ಮೇರೆಗೆ ಐದು ದಿನ ರೆಸ್ಟ್ ತಗೊಳೋದಿಕ್ಕೆ ಹೋಗಿದ್ದಾರೆ. ನೀತಿ ಸಂಹಿತೆ ಇರೋದ್ರಿಂದ ಏನೂ ಮಾಡೋಕೆ ಆಗಲ್ಲ. ನಿರಂತರವಾಗಿ ಅಧಿಕಾರಿಗಳ ಜೊತೆ ಸಿಎಂ ಸಂಪರ್ಕದಲ್ಲಿದ್ದಾರೆ. ಕುಂದಗೋಳ ಉಪ ಚುನಾವಣೆ ಹಿನ್ನೆಲೆ 12, 13ಕ್ಕೆ ಕುಮಾರಸ್ವಾಮಿ ಆಗಮಿಸುತ್ತಾರೆ ಎಂದು ಕೋನರೆಡ್ಡಿ ಮಾಹಿತಿ ನೀಡಿದರು.