ಹುಬ್ಬಳ್ಳಿ:ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ನಗರದ ಕಿಮ್ಸ್ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಮಾಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸೃಷ್ಟಿಸಿತ್ತು. ಈಗ ಮತ್ತೊಂದು ಸಾಧನೆ ಮೂಲಕ ತನ್ನ ಕೀರ್ತಿಯನ್ನು ಇಮ್ಮಡಿಗೊಳಿಸಿದೆ.
ಹೌದು, ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ಹಿಮ್ಮೆಟ್ಟಿಸುವಲ್ಲಿ ಸತತ ಹೋರಾಟ ನಡೆಸುತ್ತಿರುವ ಕಿಮ್ಸ್ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಮೂಲಕ ಜನಮನ್ನಣೆ ಪಡೆದಿದೆ. ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ 101 ಜನ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸುವ ಮೂಲಕ ಮತ್ತೊಂದು ದಾಖಲೆಯನ್ನು ಬರೆದಿದೆ.
ಒಟ್ಟು 160 ಸೋಂಕಿತರಿಗೆ ಹೆರಿಗೆ ಮಾಡಿಸಿದ್ದು, ಇದರಲ್ಲಿ 4 ಶಿಶು ಹಾಗೂ 3 ಮಹಿಳೆಯರು ಸಾವನ್ನಪ್ಪಿದ್ದು, ಕೆಲವರಿಗೆ ಮಾರಕ ರೋಗದ ನಡುವೆ ಹೆರಿಗೆ ಮಾಡಿಸಲಾಗಿದೆ. ಆದರೆ ಇದರಲ್ಲಿ ಕೆಲವು ಪ್ರಕರಣಗಳು ಕಿಮ್ಸ್ ವೈದ್ಯರಿಗೆ ಸವಾಲಾಗಿದ್ದವು. ಅವುಗಳನ್ನು ಕೂಡ ನಿಭಾಯಿಸುವ ಮೂಲಕ 101 ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆ ಮಾಡಿಸಿದೆ.
ಓರ್ವ ಗರ್ಭಿಣಿಯ ಹೊಟ್ಟೆಯಲ್ಲಿ ಗಡ್ಡೆ, ಇನ್ನೋರ್ವ ಗರ್ಭಿಣಿಗೆ ಕ್ಯಾನ್ಸರ್ ಆಗಿದ್ದು, ಇವೆಲ್ಲವೂ ಕಿಮ್ಸ್ ಸಿಬ್ಬಂದಿಗೆ ಸವಾಲು ಆಗಿದ್ದವು. ಇದನ್ನೆಲ್ಲ ಮೆಟ್ಟಿನಿಂತು ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ಸಾಧನೆ ಮಾಡಿದೆ. 35 ನಾರ್ಮಲ್ ಡೆಲಿವರಿ, 66 ಸಿಜೇರಿಯನ್ ಮಾಡಿರುವುದು ವಿಶೇಷ.
ಹೆರಿಗೆ ವಾರ್ಡ್ನಲ್ಲಿ ಕೆಲಸ ಮಾಡಿದ ಇಬ್ಬರು ಸಿಬ್ಬಂದಿ, 8 ಪಿಜಿ ವಿದ್ಯಾರ್ಥಿಗಳಿಗೆ, ಹೌಸ್ ನರ್ಸ್ ಹೀಗೆ 12 ಜನರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ಕಿಮ್ಸ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಸೇವೆ ಸಲ್ಲಿಸಿರುವುದು ಶ್ಲಾಘನೀಯ.