ಹುಬ್ಬಳ್ಳಿ : ಬಡ ರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಪ್ರಶಂಸೆಗೆ ಪಾತ್ರವಾಗಿದೆ. ಇರುವ ಸೌಲಭ್ಯಗಳನ್ನೇ ಸದುಪಯೋಗ ಪಡಿಸಿಕೊಂಡು ಇಲ್ಲಿನ ವೈದ್ಯರ ತಂಡ ವ್ಯಕ್ತಿಯೊಬ್ಬನ ಮುಖದಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಕುವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕೆ.ಕೆ.ಹಳ್ಳಿಯ ನಿವಾಸಿಯಾದ ಭೀಮರಾವ್ ಚೌಹಾಣ್, ಕಳೆದ ಏಪ್ರಿಲ್ 18 ರಂದು ನಡೆದ ಗಲಾಟೆಯಲ್ಲಿ ಮುಖಕ್ಕೆ ಹರಿತವಾದ ಚಾಕುವಿನಿಂದ ಇರಿತಕ್ಕೊಳಪಟ್ಟಿದ್ದರು. ಇದರ ಪರಿಣಾಮ ಚಾಕು ಮುಖದ ದವಡೆಯಲ್ಲಿಯೇ ಉಳಿದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಆಗ ಭೀಮರಾವ್ ಕುಟುಂಬಸ್ಥರು ಮೊದಲಿಗೆ ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿನ ವೈದ್ಯರಿಗೆ ಚಾಕುವನ್ನು ಸಂಪೂರ್ಣವಾಗಿ ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಭೀಮ್ರಾವ್ ನ್ನು ಜೂನ್ 3 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿನ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಇವರಿಗೆ ಮರುಜನ್ಮ ನೀಡಿದ್ದಾರೆ.
ಮುಖದ ದವಡೆಯಲ್ಲಿದ್ದ ಆರು ಇಂಚು ಚಾಕು ಹೊರ ತೆಗೆದ ಕಿಮ್ಸ್ ವೈದ್ಯರು ಭೀಮರಾವ್ ಚೌಹಾಣ್ ಕಿಮ್ಸ್ ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿಯೇ ಚಾಕು ಮುಖದ ಡವಡೆಯಲ್ಲಿಯೇ 20 ದಿನಗಳ ಕಾಲ ಇತ್ತು. ಇದರಿಂದ ಮುಖದ ದವಡೆ ಭಾಗದಲ್ಲಿ ತೀವ್ರವಾಗಿ ಗಾಯಗೊಂಡು, ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿತ್ತು. ಇದನ್ನು ಕಿಮ್ಸ್ ಆಸ್ಪತ್ರೆಯ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ನೇತೃತ್ವದ ತಂಡ ಸವಾಲಾಗಿ ಸ್ವೀಕರಿಸಿ ರೋಗಿಯ ಮುಖದ ಸಿಟಿ ಸ್ಕ್ಯಾನ್, ಮುಖದ ರಚನೆಯ ಸಿಟಿ ಆಂಜಿಯೋಗ್ರಾಮ್ ಮಾಡಿದರು. ಆನಂತರ ಕಿಮ್ಸ್ ಆಸ್ಪತ್ರೆಯ ಅರಿವಳಿಕೆ, ಇಎನ್ ಟಿ ಮತ್ತು ನರಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರು ಜೂನ್ 15 ರಂದು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿ ರೋಗಿಯ ಮುಖದಿಂದ 6 ಸೆಂ.ಮೀ ಮುರಿದ ಚಾಕುವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಒಟ್ಟಿನಲ್ಲಿ ವ್ಯಕ್ತಿಯ ಮುಖದ ದವಡೆಯಲ್ಲಿ ಸಿಕ್ಕಿಹಾಕಿಕೊಂಡ ಚಾಕು ಮೆದುಳು, ಬೆನ್ನುಹುರಿ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು. ಶಸ್ತ್ರಚಿಕಿತ್ಸೆಯು ಜೀವಕ್ಕೆ ಅಪಾಯಕಾರಿ ಮತ್ತು ಸವಾಲಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಕಿಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ವೈದ್ಯರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತವಾಗುತ್ತಿದೆ.
ಓದಿ :ಪ್ರತಿ ಮಂಗಳವಾರ, ಶುಕ್ರವಾರ ಪಾಲಿಕೆ ಮುಖ್ಯ ಆಯುಕ್ತರ ನಡೆ ವಲಯ ಕಚೇರಿಗಳ ಕಡೆ