ಹುಬ್ಬಳ್ಳಿ:ಕೊರೊನಾ ಮಹಾಮಾರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ನಿರಾಕರಿಸಿದಾಗ ಕಿಮ್ಸ್ ಕೊರೊನಾ ವಿರುದ್ಧ ಸೆಡ್ಡು ಹೊಡೆದು ಹೋರಾಟ ನಡೆಸಿದೆ. ಅದರಲ್ಲೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ಮರಳಿ ಮನೆಗೆ ಬರುವುದಿಲ್ಲ ಎಂಬ ಮಾತನ್ನು ಕೊರೊನಾ ಚಿಕಿತ್ಸೆ ವಿಷಯದಲ್ಲಿ ಸುಳ್ಳಾಗಿಸಿದೆ. ಸರ್ಕಾರದ ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಂಡು ಉತ್ತಮ ಚಿಕಿತ್ಸೆ ನೀಡುವ ಮೂಲಕ ಕಿಮ್ಸ್ ಉತ್ತರ ಕರ್ನಾಟಕದ ಜನರ ಪಾಲಿಗೆ ಸಂಜೀವಿನಿಯಾಗಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಕಿಮ್ಸ್ ಸೈ ಎನಿಸಿಕೊಂಡಿದೆ. ಕೋಟಿಗಟ್ಟಲೇ ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆದರೂ ಗುಣವಾಗುತ್ತಿಲ್ಲ. ಬದಲಿಗೆ ಕಿಮ್ಸ್‌ಗೆ ದಾಖಲಾದವರು ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ. ಬಹಳಷ್ಟು ರೋಗಿಗಳು ಕಿಮ್ಸ್ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕದ 8 ಜಿಲ್ಲೆಯ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಆದರೆ, ಕೊರೊನಾ ವಿಷಯದಲ್ಲಿ ಕರ್ನಾಟಕಕ್ಕೆ ಸಂಜೀವಿನಿ ಆಗಿದೆ. ದಕ್ಷಿಣ ಕರ್ನಾಟಕದ ಜನ ಬಂದು ಕೊರೊನಾಗೆ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಈಗಾಗಲೇ 600 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ 450 ಬೆಡ್ ತುಂಬಿವೆ. ಇವುಗಳಲ್ಲಿ 350 ಕೋವಿಡ್ ರೋಗಿಗಳು, 125 Sariಗೆ ಸಂಬಂಧಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 200 ಐಸಿಯು ಬೆಡ್ ಇವೆ. ಇವೆಲ್ಲದರ ನಡುವೇ ಇನ್ನೂ 400 ಬೆಡ್ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.