ಹುಬ್ಬಳ್ಳಿ: ಒಂಬತ್ತು ತಿಂಗಳ ಮಗುವಿನ ಮುಖಕ್ಕೆ ತೋಳ ಕಚ್ಚಿದ್ದರಿಂದ ದವಡೆ ಕಿತ್ತು ಮಗು ಗಂಭೀರ ಸ್ಥಿತಿಯಲ್ಲಿತ್ತು. ಆದರೆ, ಮಗುವಿನ ದವಡೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕಿಮ್ಸ್ ವೈದ್ಯರು ಮರುಜೀವ ನೀಡಿದ್ದಾರೆ.
ಮಗುವಿಗೆ ತೋಳ ಕಚ್ಚಿದ್ದರಿಂದ ದವಡೆ ಕಿತ್ತಿತ್ತು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿಗೆ ಸತತ ನಾಲ್ಕು ತಾಸುಗಳವರೆಗೆ ಫೇಸಿಯೋ ಮ್ಯಾಕ್ಸಿಲರಿ ಸರ್ಜರಿ ನಡೆಸಿದ ಕಿಮ್ಸ್ ವೈದ್ಯರು ಮರುಜೀವ ನೀಡಿದ್ದಾರೆ.
ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಹುಸನೆಪ್ಪ ಮತ್ತು ದುರ್ಗಮ್ಮ ಎಂಬ ದಂಪತಿಯ ಮಗ ಅನ್ನಪ್ಪ ಎಂಬ ಮಗು ಶಸ್ತ್ರಚಿಕಿತ್ಸೆಗೊಳಗಾಗಿದೆ. ಊರಿನ ಹೊರವಲಯದ ಹೊಲದಲ್ಲಿ ಜೋಪಡಿ ಹಾಕಿಕೊಂಡು ದಂಪತಿ ವಾಸಿಸುತ್ತಿದ್ದರು.
ಮಾರ್ಚ್ 7ರಂದು ರಾತ್ರಿ ವೇಳೆ ತೋಳವೊಂದು ಮಗುವಿನ ಮೇಲೆ ಏಕಾಏಕಿ ದಾಳಿ ಮಾಡಿ, ಮುಖ ಕಚ್ಚಿ ತಿಂದಿದೆ. ಇದರಿಂದ ಮುಖ ಮತ್ತು ದವಡೆಯ ಕೆಳಗಿನ ಭಾಗ ಸಂಪೂರ್ಣ ಸೀಳಿ ಹಾಕಿತ್ತು. ಮಗುವಿಗೆ ತೀವ್ರ ರಕ್ತಸ್ರಾವವಾಗಿ ಸ್ಥಿತಿ ಗಂಭೀರವಾಗಿತ್ತು.
ತೋಳದ ದಾಳಿಗೊಳಗಾದ ಮಗುವಿಗೆ ಮರುಜೀವ ನೀಡಿದ ಕಿಮ್ಸ್ ವೈದ್ಯರು.. ತಕ್ಷಣ ಪಾಲಕರು ಮಗುವನ್ನು ಹೊಸರಿತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅವರು ಹಾವೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಬಾಯಿ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಇಲ್ಲದ್ದರಿಂದ ಕಿಮ್ಸ್ಗೆ ಕಳುಹಿಸಲಾಯಿತು.
ಇದನ್ನು ಕಿಮ್ಸ್ ವೈದ್ಯರು ಸವಾಲಾಗಿ ಸ್ವೀಕರಿಸಿ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಗುವಿಗೆ ಜೀವದಾನ ಮಾಡಿದ್ದಾರೆ ಮತ್ತು ಮಗುವಿನ ರೂಪವನ್ನು ಸಹ ಮರಳಿ ತಂದಿದ್ದಾರೆ.