ಹುಬ್ಬಳ್ಳಿ:ಗ್ರಾಹಕರ ಆರೋಗ್ಯದ ಜೊತೆಗೆ ಕೊರೊನಾ ವೈರಸ್ ನಿಯಂತ್ರಣ ಮಾಡುವ ಸದುದ್ದೇಶದಿಂದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹೊಸ ನಿರ್ಧಾರವನ್ನು ಕೈಗೊಂಡಿದ್ದು, ವರ್ತಕರಲ್ಲಿ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.
ಕೆ.ಎಲ್.ಇ ಸಂಸ್ಥೆಯ ಮುಖ್ಯಸ್ಥ ಶಂಕರಣ್ಣ ಮುನವಳ್ಳಿ ಮಾತನಾಡಿ, ಪ್ರತಿ ದಿನ ಸಂಜೆ ಐದು ಗಂಟೆಗೆ ನಗರದ ಅಂಗಡಿಗಳನ್ನು ಬಂದ್ ಮಾಡಬೇಕು. ಅಲ್ಲದೆ ವರ್ತಕರು ತಮ್ಮ ತಮ್ಮ ಅಂಗಡಿಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ಕೊರೊನಾ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಿರ್ಧಾರ ವಾಣಿಜ್ಯ ಕ್ಷೇತ್ರದ ಹೃದಯ ಭಾಗವಾಗಿರುವ ಹುಬ್ಬಳ್ಳಿಯಲ್ಲಿ ಸಾರ್ವಜನಿಕರು ಹಾಗೂ ವರ್ತಕರಲ್ಲಿ ಆರೋಗ್ಯ ಜಾಗೃತಿ ಮರೆಯಾಗುತ್ತಿದೆ. ಈ ಹಿನ್ನೆಲೆ ವೈದ್ಯರನ್ನು ಕರೆಸಿ ಆರೋಗ್ಯದ ಬಗ್ಗೆ ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ಬಗ್ಗೆ ವರ್ತಕರಿಗೆ ಸಲಹೆ ನೀಡಲಾಗಿದೆ. ಸಭೆಯಲ್ಲಿ ಜು. 31ರವರೆಗೆ ಸಂಜೆ ಐದು ಗಂಟೆಗೆ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಲಾಯಿತು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ತೀರ್ಮಾನಕ್ಕೆ ವರ್ತಕರು ಸಮ್ಮತಿ ಸೂಚಿಸಿದ್ದು, ಕೊರೊನಾ ವೈರಸ್ ನಿಯಂತ್ರಣದ ಜೊತೆಗೆ ತಮ್ಮ ಹಾಗೂ ಗ್ರಾಹಕರ ಆರೋಗ್ಯ ಕಾಪಾಡಲು ಮುಂದಾಗಿದ್ದಾರೆ.