ಹುಬ್ಬಳ್ಳಿ: ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದಂತೆ ಕೆಲ ನಾಯಕರಿಗೆ ಕ್ಷೇತ್ರ ಹುಡುಕಾಟ ಅನಿವಾರ್ಯವಾಗಿದೆ. ಇಷ್ಟು ದಿನ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಮುಂಚೂಣಿಯಲ್ಲಿತ್ತು. ಬಿಜೆಪಿ ನಾಯಕರು ಕ್ಷೇತ್ರ ಇಲ್ಲದ ನಾಯಕ ಎಂದು ಸಿದ್ದರಾಮಯ್ಯ ಅವರಿಗೆ ಲೇವಡಿ ಮಾಡುತ್ತಿದ್ದರು. ಆದ್ರೆ ಇದೀಗ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ತಮ್ಮ ಕ್ಷೇತ್ರ ಶಿಗ್ಗಾಂವಿ ಬಿಟ್ಟು ತವರು ಕುಂದಗೋಳದತ್ತ ಮುಖಮಾಡುವ ಲಕ್ಷಣ ಗೋಚರಿಸುತ್ತಿವೆ.
ಪ್ರತಿ ಸಲ ಬಸವರಾಜ್ ಬೊಮ್ಮಾಯಿ ಸ್ಪರ್ಧೆ ಮಾಡಿರುವ ಶಿಗ್ಗಾಂವಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ತಗೆದುಕೊಂಡಿದೆ. ಶಿಗ್ಗಾಂವಿಯಲ್ಲಿ ಪ್ರಬಲ ಅಭ್ಯರ್ಥಿ ಹಾಕಲು ಕಾಂಗ್ರೆಸ್ ಮುಂದಾಗಿದೆ. ವಿನಯ ಕುಲಕರ್ಣಿ ಅಥವಾ ಬೇರೊಬ್ಬರನ್ನು ನಿಲ್ಲಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಹೀಗಾಗಿ ಸುಲಭವಾಗಿ ಗೆಲ್ಲುವ ಕ್ಷೇತ್ರದ ಹುಡುಕಾಟದಲ್ಲಿ ಬೊಮ್ಮಾಯಿ ಇದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿ ತವರೂರಿನತ್ತ ಚಿತ್ತ ಹರಿಸಿದ್ದಾರೆ. ತಂದೆ ಸ್ಪರ್ಧಿಸಿ ಗೆದ್ದಿದ್ದ ಕುಂದಗೋಳದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲು ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದಲ್ಲಿ ಕುಂದಗೋಳದಿಂದ ಸ್ಪರ್ಧೆ ಮಾಡಲು ಸಿಎಂ ಬೊಮ್ಮಾಯಿ ಚಿಂತನೆ ಇದೆ. ಇತ್ತೀಚೆಗಷ್ಟೇ ಸ್ವಗ್ರಾಮ ಕಮಡೊಳ್ಳಿಗೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ, ತಮ್ಮ ಮನೆ, ಗ್ರಾಮವನ್ನು ಕಂಡು ಕಣ್ಣೀರು ಹಾಕಿದ್ದರು. ಸಿಎಂ ದಿಢೀರ್ ಭೇಟಿಯಿಂದ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದರು. ಇದರ ಬೆನ್ನ ಹಿಂದೆಯೇ ಕುಂದಗೋಳದಿಂದ ಸ್ಪರ್ಧಿಸ್ತಾರೆ ಎಂಬ ಸುದ್ದಿಗೆ ರೆಕ್ಕೆಪುಕ್ಕ ಬಂದಂತಿದೆ.