ಧಾರವಾಡ:ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದೇ ಪ್ರಸಿದ್ಧರಾದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ (93) ಅವರು ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚೆನ್ನವೀರ ಕಣವಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು. ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಜನವರಿ 14ರಂದು ದಾಖಲಿಸಲಾಗಿತ್ತು.
ಚೆನ್ನವೀರ ಕಣವಿಯವರು ಜೂನ್ 28,1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದರು. ಕಣವಿಯವರ ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದವರು. ತಂದೆಯವರು ಆರಂಭದಲ್ಲಿ ಗದಗ ತಾಲೂಕಿನ ಶಿರುಂದದಲ್ಲಿ ಶಿಕ್ಷಕರಾಗಿದ್ದ ಕಾರಣ ಕಣವಿಯಲವರು ಅಲ್ಲಿಯೇ ಬಾಲ್ಯ ಕಳೆದಿದ್ದರು. ನಾಲ್ಕನೇ ತರಗತಿವರೆಗೆ ಶಿರುಂದದಲ್ಲಿಯೇ ಶಿಕ್ಷಣ ಪಡೆದಿದ್ದರು.
ಬಳಿಕ ಧಾರವಾಡ ತಾಲೂಕಿನ ಗರಗ ಶಾಲೆಯಲ್ಲಿ 7ನೇ ತರಗತಿವರೆಗೆ ಓದಿದ್ದರು. ನಂತರ ಧಾರವಾಡದ ಮುರುಘಾ ಮಠದಲ್ಲಿದ್ದುಕೊಂಡು ಹೈಸ್ಕೂಲ್ ಶಿಕ್ಷಣ ಹಾಗೂ ಬಳಿಕ ಕರ್ನಾಟಕ ಕಾಲೇಜಿನಲ್ಲಿ ಬಿಎ ಶಿಕ್ಷಣ ಪಡೆದಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಕಣವಿಯವರ ಕವನಗಳನ್ನು ನೋಡಿ ಡಿವಿಜಿಯವರು ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದರು. 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.
ಬಾಲ್ಯದಲ್ಲೇ ಗಾಂಧಿ ಟೋಪಿ ನಾಟಕದಲ್ಲಿ ಅಭಿನಯಿಸಿದ್ದ ಕಣವಿ, ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಧಾರವಾಡದ ಮಾಳಮಡ್ಡಿಯಲ್ಲಿ ಕಾವ್ಯಾನುಭವ ಮಂಪಟ ಆರಂಭಿಸಿ ಕವಿತಾ ವಾಚನ ಅಭಿಯಾನ ನಡೆಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಿದ ಅವರು, ಬಳಿಕ 1956ರಲ್ಲಿ ಅದೇ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದ್ದರು.