ಧಾರವಾಡ: ನ್ಯಾಯಾಲಯದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಂಜಯ ಗುಡಗುಡಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಕೋವಿಡ್ ಎಸ್ಒಪಿ ಹಾಗೂ ಜೈಲು ನಿಯಮಗಳ ಪಾಲನೆ ಕುರಿತು ಪರಿಶೀಲಿಸಿದರು.
ಕೇಂದ್ರ ಕಾರಾಗೃಹದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನೀಡಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಅವರು ಪರಿಶೀಲಿಸಿದರು.
ಶಿಕ್ಷೆಗೆ ಒಳಪಟ್ಟ ಅಪರಾಧಿ, ವಿಚಾರಣಾಧೀನ ಮತ್ತು ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಆರೋಪಿತರು ಜೈಲಿಗೆ ಆಗಮಿಸಿದಾಗ ಅವರಿಗೆ ಜೈಲಿನ ಮುಖ್ಯ ಕಟ್ಟಡದ ಹೊರಭಾಗದ ಪ್ರತ್ಯೇಕ ಕಟ್ಟಡದಲ್ಲಿ 21 ದಿನ ಹಾಗೂ ಜೈಲಿನೊಳಗೆ ಪ್ರತ್ಯೇಕವಾಗಿ 14 ದಿನ ಕ್ವಾರಂಟೈನ್ ಆಗುವ ಕೊಠಡಿಗಳನ್ನು ಪರಿಶೀಲಿಸಿದರು.
ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಂಜಯ ಗುಡಗುಡಿ ಅವರು ಒಬ್ಬರೇ ಪ್ರತ್ಯೇಕವಾಗಿ ಕೈದಿಗಳೊಂದಿಗೆ ಊಟ, ವಸತಿ, ಚಿಕಿತ್ಸೆ ಹಾಗೂ ಸಂವಹನ ಸೌಲಭ್ಯ ಕುರಿತು ಮಾತನಾಡಿಸಿ ಅಭಿಪ್ರಾಯ ಪಡೆದರು. ಈ ಸಂದರ್ಭದಲ್ಲಿ ಜೈಲು ಸೌಲಭ್ಯಗಳ ಬಗ್ಗೆ ಕೈದಿಗಳು ತೃಪ್ತಿ ವ್ಯಕ್ತಪಡಿಸಿದರು.
ಕೈದಿಗಳು ತಮ್ಮ ಕುಟುಂಬಸ್ಥರು, ಸಂಬಂಧಿಗಳು ಮತ್ತು ವಕೀಲರೊಂದಿಗೆ ಮುಖಾಮುಖಿ ಸಂವಹನಕ್ಕಾಗಿ ಸ್ಥಾಪಿಸಿರುವ ಇ-ಮುಲಾಕತ್ (ವಿಸಿ) ಸೌಲಭ್ಯ ಹಾಗೂ ಸ್ಥಿರ ದೂರವಾಣಿ ಪ್ರಿಸನ್ ಕಾಲ್ ಸಿಸ್ಟಮ್ ಅಳವಡಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಜೈಲು ಅಧೀಕ್ಷಕ ಎಂ.ಎ.ಮರಿಗೌಡ ಅವರು ಮಾತನಾಡಿ, ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ 246 ಪುರುಷ, 25 ಮಹಿಳಾ ಸೇರಿ 271 ಜನ ಹಾಗೂ ಶಿಕ್ಷೆಗೆ ಒಳಪಟ್ಟ 303 ಪುರುಷ, 9 ಮಹಿಳೆ ಸೇರಿ ಒಟ್ಟು 583 ಜನರಿದ್ದಾರೆ. 6 ತಿಂಗಳು ಹಾಗೂ ಒಂದು ವರ್ಷ ತುಂಬಿರುವ ಎರಡು ಚಿಕ್ಕ ಮಕ್ಕಳಿದ್ದಾರೆ.
ಎಲ್ಲರಿಗೂ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಜೈಲು ವೈದ್ಯಾಧಿಕಾರಿಯಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಉಚಿತವಾಗಿ ಎಲ್ಲರಿಗೂ ಮಾಸ್ಕ್ ನೀಡಲಾಗುತ್ತಿದೆ. ಮತ್ತು ಜೈಲು ಆವರಣದಲ್ಲಿ ಪ್ರತಿದಿನ ಮೂರು ಸಲ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಂಜಯ ಗುಡಗುಡಿ ಅವರಿಗೆ ಮಾಹಿತಿ ನೀಡಿದರು.