ಧಾರವಾಡ :ಇಲ್ಲಿನ ಕೇಂದ್ರ ಕಾರಾಗೃಹವು ಪ್ರತಿಯೊಂದು ಕೆಲಸವನ್ನು ಒಳ್ಳೆ ರೀತಿಯಿಂದ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಎಲ್ಲಾ ಕಾರಾಗೃಹಗಳಿಗಿಂತ ಧಾರವಾಡ ಕೇಂದ್ರ ಕಾರಾಗೃಹ ಉತ್ತಮ ಕಾರ್ಯಕ್ಷಮತೆ ಹೊಂದಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ಬಿ.ವೀರಪ್ಪ ಅವರು ಹೇಳಿದರು.
ಧಾರವಾಡ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಅವರು, ಕೈದಿಗಳ ಊಟ, ಆರೋಗ್ಯ, ಅರಿವು, ಪರಿವರ್ತನೆ ಮತ್ತು ಕಾನೂನು ನೆರವು ಕುರಿತು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಕಾರಾಗೃಹದಲ್ಲಿನ ಆಹಾರ ದಾಸ್ತಾನು ಕೊಠಡಿ, ಟೆಲಿಫೋನ್ ಬೂತ್, ಗ್ರಂಥಾಲಯ, ಅಡುಗೆ ಮನೆ, ದನದ ಕೊಟ್ಟಿಗೆ, ಹೈನುಗಾರಿಕೆ ವಿಭಾಗಗಳನ್ನು ವೀಕ್ಷಿಸಿ, ಪರಿಶೀಲಿಸಿದರು.
ಅಡುಗೆಮನೆಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು ಸ್ವತಃ ಅನ್ನ-ಸಾರು, ಚಪಾತಿ ಸವಿಯುವ ಮೂಲಕ ಆಹಾರದ ಗುಣಮಟ್ಟ ಪರೀಕ್ಷಿಸಿದರು. ಜೈಲಿನಲ್ಲಿರುವ ಪುರುಷ ಹಾಗೂ ಮಹಿಳಾ ಕೈದಿಗಳ ವಾರ್ಡ್ಗಳಿಗೆ ಭೇಟಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿದರು. ಅಗತ್ಯವಿರುವ ಕೈದಿಗಳಿಗೆ ಉಚಿತವಾಗಿ ನ್ಯಾಯವಾದಿಗಳನ್ನು ನೀಡಿ, ಅವರ ಪರವಾಗಿ ಪ್ರಕರಣಗಳನ್ನು ನಡೆಸಲು ಪ್ರಾಧಿಕಾರದಿಂದ ಸಹಾಯ ಮಾಡುವುದಾಗಿ ನ್ಯಾಯಮೂರ್ತಿಗಳು ಭರವಸೆ ನೀಡಿದರು.