ಹುಬ್ಬಳ್ಳಿ: ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆಲಸ ಮಾಡಲಿಲ್ಲ. ಹಾಗಾಗಿ ಜನ ಸೋಲಿಸಿ ಮನೆಗೆ ಕಳುಸಿದ್ರು. ಬಾದಾಮಿಯಲ್ಲಿ ಏನ್ ಪುಣ್ಯ ಇತ್ತೋ ಏನೋ, ಆರಿಸಿ ಬಂದಿದ್ದಾರೆ. ದೊಡ್ಡ ನಾಯಕರಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು ಅಲ್ಲಿ ಗೆದ್ರು. ಸಿದ್ದರಾಮಯ್ಯ ಎಲ್ಲಿ ಹೋದ್ರು ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪ್ರತಿ ಸಲ ಅಬ್ಬೇಪಾರಿಯಂತೆ ಓಡಾಡ್ತಿದ್ದಾರೆ. ಈ ಸಲ ಕೋಲಾರಕ್ಕೆ ಹೋಗಿದ್ದಾರೆ. ನಾನು ಕೋಲಾರದವರಿಗೆ ಹೇಳ್ತೀನಿ, ಚಾಮುಂಡೇಶ್ವರಿಯಲ್ಲಿ ಏನ್ ಮಾಡಿದಾರೆ, ಬಾದಾಮಿಯಲ್ಲಿ ಏನ್ ಮಾಡಿದ್ದಾರೆ ಕೇಳಿ. ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ಇವತ್ತೇ ನಾನು ಹೇಳ್ತೀನಿ. ಸಿದ್ದರಾಮಯ್ಯ ಇನ್ನು ಸ್ವಲ್ಪ ದಿನದಲ್ಲಿ ಯಾವ ಪಾರ್ಟಿಗೆ ಹೋಗ್ತಾರೆ ನೋಡೋಣ ಎಂದು ಕಾಲೆಳೆದರು.
ಸಿದ್ದರಾಮಯ್ಯ ಎಲ್ಲಾದ್ರೂ ನಿಲ್ಲಲಿ:ಕೋಲಾರದಲ್ಲಿ ಪಕ್ಷದ ಸ್ಥಿತಿ ಏನಿದೆ ಅನ್ನೋದನ್ನ ಅವರು ಅರ್ಥಮಾಡಿಕೊಳ್ಳಲಿ. ನಿಲ್ಲೋದಾದರೆ ಅಲ್ಲೇ ನಿಲ್ಲಲಿ, ಅದು ಅವರಿಗೆ ಬಿಟ್ಟಿದ್ದು. ಸಿದ್ದರಾಮಯ್ಯ ಬಾದಾಮಿಯಲ್ಲಿ 500, 1000 ವೋಟ್ಗಳ ಅಂತರಿದಿಂದ ಆರಿಸಿ ಬಂದ್ರು. ಚಾಮುಂಡೇಶ್ವರಿಯಲ್ಲಿ ಜನ ಸಿದ್ದರಾಮಯ್ಯರನ್ನು ರಿಜೆಕ್ಟ್ ಮಾಡಿದ್ರು. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ರೂ ಸೋತಂತೆ. ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದವರಿಗೆ ಹೆದರಿಕೆ ಇದೆ ಅಂದ್ರೆ ಅವರ ವ್ಯಕ್ತಿತ್ವ ಅರ್ಥ ಆಗುತ್ತದೆ ಎಂದು ಜೋಶಿ ಟೀಕಿಸಿದರು.