ಹುಬ್ಬಳ್ಳಿ: ಹಥ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಘೋಷಣೆ ಕೂಗಿದರು.
ಸಂತ್ರಸ್ತೆಯ ಕುಟುಂಬಸ್ಥರಿಗೂ ತಿಳಿಸದೇ ಅಂತ್ಯಕ್ರಿಯೆ ನಡೆಸಿದ ಅಧಿಕಾರಿಗಳ ನಡೆಯನ್ನು ಪ್ರತಿಭಟನಾಕಾರರು ಖಂಡಿಸಿದರು. ನಗರದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದರು.
ಹಥ್ರಾಸ್ ಅತ್ಯಾಚಾರ ಖಂಡಿಸಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ವಿಫಲವಾಗಿದೆ. ಅಲ್ಲದೆ ಉತ್ತರ ಪ್ರದೇಶದ ಪೊಲೀಸರು, ಅಪರಾಧಗಳನ್ನು ಮರೆಮಾಚಲು ಪ್ರಕರಣದ ಸಾಕ್ಷ್ಯಗಳನ್ನು ನಾಶಮಾಡುತ್ತಿದ್ದಾರೆ ಎಂದು ಸಂಘಟನೆ ಸದಸ್ಯರು ಆರೋಪಿಸಿದರು.
ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಈ ಪ್ರಕರಣವನ್ನು ಇತರೆ ರಾಜ್ಯದ ವಿಶೇಷ ತ್ವರಿತ ವಿಚಾರಣಾ ನ್ಯಾಯಾಲಯಕ್ಕೆ ನೀಡಬೇಕು. ಉತ್ತರ ಪ್ರದೇಶ ಸರ್ಕಾರವು ಸಂತ್ರಸ್ತೆಯ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.