ಧಾರವಾಡ: ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ನಾಗರಿಕರು ತಮ್ಮ ಅಹವಾಲನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ತಾಲೂಕಾ ಮಟ್ಟದಲ್ಲಿ ಜನತಾ ದರ್ಶನ ಆಯೋಜಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಜನತಾ ದರ್ಶನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಇಂದು ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸುಮಾರು 405ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಶೇ.50 ರಿಂದ 60ರಷ್ಟು ಪ್ರಕರಣಗಳಲ್ಲಿ ರಾಜ್ಯಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಕುರಿತು ಅಹವಾಲು ಸಲ್ಲಿಕೆದಾರರಿಗೆ ಮನವರಿಕೆ ಮಾಡಿ ಅರ್ಜಿಗಳನ್ನು ಸಂಬಂಧಪಟ್ಟ ರಾಜ್ಯಮಟ್ಟದ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ಶಿಫಾರಸ್ಸಿನೊಂದಿಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
405ಕ್ಕೂ ಹೆಚ್ಚು ಅಹವಾಲು ಸಲ್ಲಿಕೆ: ಕೆಲವು ಅಹವಾಲುಗಳು ಸ್ಥಳೀಯ ಮಟ್ಟದ್ದಾಗಿದ್ದವು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯ ಮಟ್ಟದಲ್ಲಿ ಪರಿಹರಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಅಹವಾಲಿಗೆ ಸಂಬಂಧಿಸಿದ ಅಧಿಕಾರಿಗಳು ದೂರುದಾರರೊಂದಿಗೆ ಸಮಾಲೋಚನಾ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಲಾಗಿದೆ ಎಂದರು.
ಜನತಾ ದರ್ಶನದಲ್ಲಿ ಅವಳಿನಗರದ ಜಗದೀಶ ನಗರ, ರಾಮನಗರ, ನೆಹರು ನಗರಗಳ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ಹಕ್ಕುದಾರಿಕೆ ಬಗ್ಗೆ ದೂರುಗಳು ಬಂದಿದ್ದವು. ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ಮನೆ ಮನೆ ಸಮೀಕ್ಷೆ ಹಾಗೂ ಅವುಗಳ ಅಗತ್ಯ ದಾಖಲಾತಿಗಳ ಪಡೆಯುವಿಕೆ ಕಾರ್ಯ ನಡೆದಿದೆ. ಮುಂದಿನ ಎರಡು ಮೂರು ತಿಂಗಳಿನಲ್ಲಿ ಆಶ್ರಯ ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳ, ಪಾಲಿಕೆ ಸದಸ್ಯರ ಸಭೆ ನಡೆಸುವ ಮೂಲಕ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲಾಗುವುದು. ಗುಳೆದಕೊಪ್ಪ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದ್ದು, ಕೆಲವು ರೈತರು ಇಂದಿನ ಜನತಾ ದರ್ಶನದಲ್ಲಿ ಭೂಮಿ ದರದ ಬಗ್ಗೆ, ಭೂಮಿ ನೀಡದಿರುವ ಬಗ್ಗೆ ಅಹವಾಲು ಸಲ್ಲಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಕಾನೂನಾತ್ಮಕವಾದ ಕ್ರಮ ವಹಿಸಲಾಗುವುದು ಸಚಿವರು ತಿಳಿಸಿದರು.
ಪರಿಹಾರಕ್ಕೆ ಸಚಿವರ ಸೂಚನೆ :ಜಿಲ್ಲೆಯಲ್ಲಿ ಬರ ಘೋಷಣೆಯಾಗಿದ್ದರೂ ಕೆಲವು ಬ್ಯಾಂಕರ್ಸ್‍ಗಳು ರೈತರಿಗೆ ಸಾಲ ವಸೂಲಾತಿಗಾಗಿ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಈ ಕುರಿತು ರಕ್ಷಣೆ ನೀಡಬೇಕೆಂದು ರೈತರು ಅಹವಾಲು ಸಲ್ಲಿಸಿದ್ದಾರೆ. ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಸಂಬಂಧಿಸಿದ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿ, ಸಾಲ ವಸೂಲಾತಿಗಾಗಿ ಯಾವುದೇ ರೀತಿಯ ಒತ್ತಡ, ನೋಟಿಸ್ ನೀಡದಂತೆ ಸೂಚಿಸಲಾಗಿದೆ. ಮತ್ತು ನೀಡಿರುವ ನೋಟಿಸ್‍ಗಳನ್ನು ನಿಯಮಾನುಸಾರ ಹಿಂಪಡೆಯುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.