ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹುಬ್ಬಳ್ಳಿ : ಗಾಲಿ ಜನಾರ್ಧನ ರೆಡ್ಡಿಯ ರಾಜಕೀಯ ಪಕ್ಷ ಧೂಳೀಪಟವಾಗಲಿದೆ. ಬಳ್ಳಾರಿ ಮತ್ತು ಆಂಧ್ರ ಪ್ರದೇಶ ಪ್ರವೇಶಕ್ಕೆ ಅವರಿಗೆ ಸುಪ್ರೀಂ ಕೋರ್ಟ್ ನಿರ್ಬಂಧ ಹಾಕಿದೆ. ಇಂಥವರು ಸಾರ್ವಜನಿಕ ಜೀವನಕ್ಕೆ ಬರಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಥವರ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ತರುವುದು ಸರಿಯಲ್ಲ. ದಶಕಗಳ ಹಿಂದೆ ಇಂಥದ್ದೊಂದು ಪ್ರಯತ್ನ ನಡೆದಿತ್ತು. ಗಾಲಿ ಜನಾರ್ಧನ ರೆಡ್ಡಿ ಬಲಗೈ ಬಂಟ ಶ್ರೀರಾಮುಲು ಬಿಎಸ್ಆರ್ ಆರಂಭಿಸಿದ್ದರು. ಬಿಎಸ್ಆರ್ ಗಾಳಿಪಟದಂತೆ ಹಾರಿ ಹೋಗಲು ನಾವು ಪಾದಯಾತ್ರೆ ಮಾಡಿದ್ದೆವು ಎಂದರು. ರೆಡ್ಡಿಗೂ ನೆಲ ಕಚ್ಚುವ ಸಮಯ ಬಂದೇ ಬರುತ್ತದೆ. ಇಂಥವರ ಪಕ್ಷಕ್ಕೆ ನಮ್ಮ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನ ಇರಬಾರದು ಎಂದು ಹೇಳಿದರು.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನಕರ್ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಸಂವಿಧಾನದ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ಇವರು ತಮ್ಮ ಸ್ಥಾನದಲ್ಲಿ ಮುಂದುವರೆಯುವ ಮೌಲ್ಯ ಕಳೆದುಕೊಂಡಿದ್ದಾರೆ. ಇಂಥವರ ವಿರುದ್ಧದ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವಿ.ಜಿ.ಸಿದ್ಧಾರ್ಥ ಮಾಲೀಕತ್ವದ ಜಮೀನನ್ನು ಕೆಲವು ಎನ್.ಜಿ.ಒ ಹಾಗೂ ಪ್ರಭಾವಿ ಅಧಿಕಾರಿಗಳು ಶಾಮೀಲಾಗಿ 708 ಕೋಟಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಸರ್ಕಾರದ ಬೆಲೆಗಿಂತ ಹೆಚ್ಚಿನ ಬೆಲೆ ಮಾರಾಟ ಮಾಡುವ ಕುತಂತ್ರ ನಡೆಸುತ್ತಿದ್ದಾರೆ. ಇವರ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಬೇಕೆಂದು ಹಿರೇಮಠ್ ಒತ್ತಾಯಿಸಿದರು. ಇದೇ ವೇಳೆ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಗೋಮಾಳ ಜಮೀನು ಕಬಳಿಕೆ ಮಾಡಿ ಫಾರ್ಮಂ ಹೌಸ್ ಕಟ್ಟಿದ್ದಾರೆ. ಇದರ ವಿರುದ್ದ ನ್ಯಾಯಾಲಯ ಕೊಟ್ಟ ತೀರ್ಪು ಸ್ವಾಗತಿಸಲಾಗುವುದು ಎಂದರು.
ಇದನ್ನೂ ಓದಿ :ಪ.ಜಾತಿ, ಪಂಗಡದ ಮಕ್ಕಳು ಶುಲ್ಕ ಪಾವತಿಸಿಲ್ಲವೆಂದು ಹಾಲ್ ಟಿಕೆಟ್ ನಿರಾಕರಿಸುವಂತಿಲ್ಲ- ಸೂಚನೆ