ಜೈನ ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯ ಹುಬ್ಬಳ್ಳಿ : ನಮ್ಮ ಭಾರತ ದೇಶದಲ್ಲಿ ಆತಂಕವಾದಿಗೆ ಯಾವ ಶಿಕ್ಷೆಯಾಗುವುದಿಲ್ಲವೋ ಅಂತಹ ಶಿಕ್ಷೆ ಜೈನ ಮುನಿಗೆ ನೀಡಲಾಗಿದೆ. ಕಾಮಕುಮಾರ ನಂದಿ ಮಹಾರಾಜ ಅವರನ್ನು ಈ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಹುಬ್ಬಳ್ಳಿಯ ವರೂರಿನಲ್ಲಿ ಜೈನ ಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ.
ವರೂರಿನಲ್ಲಿ ಮಾತನಾಡಿದ ಅವರು, ಇಂತಹ ಕ್ರೂರವಾದ ಘಟನೆಯಾದರೂ ಸಹ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸ್ಪಂದನೆ ಮಾಡಿರಲಿಲ್ಲ. ಮಾಧ್ಯಮಗಳ ಸಹಾಯದಿಂದ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಬಳಿಕ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದ್ದು, ಈ ಸಂಬಂಧ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ನಾಳೆ ಸಂಜೆ 5 ಗಂಟೆವರೆಗೆ ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವುದಾಗಿ ಹೇಳಿದ್ದು, ನಾಳೆ ಸಿದ್ದರಾಮಯ್ಯ ಅವರು ಕೂಡ ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ವಿಚಾರವಾಗಿ ಪ್ರಹ್ಲಾದ್ ಜೋಶಿ ಅವರ ಮೂಲಕ ಕೇಂದ್ರ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಗೆ ಸರ್ಕಾರ ನಾಳೆ ಸಂಜೆ ಹೊತ್ತಿಗೆ ಸ್ಪಂದಿಸದೇ ಹೋದಲ್ಲಿ ಅಮರಣಾಂತ ಉಪವಾಸ ಶುರು ಮಾಡುತ್ತೇವೆ. ನಮಗೆ ಭದ್ರತೆ ಒದಗಿಸುವವರೆಗೂ ನಿರಂತರವಾಗಿ ಅಮರಣಾಂತ ಉಪವಾಸ ಶತಸಿದ್ಧ ಎಂದು ಸ್ವಾಮೀಜಿ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.
ಮಳೆ ಚಳಿ ಎನ್ನದೇ ಜೈನ ಮುನಿಗಳು ಧರ್ಮ ಪ್ರಚಾರಕ್ಕಾಗಿ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಜೈನಮುನಿಗಳು ತಮಗೆ ಬೇಕಾದ ಆಹಾರದ ಬುತ್ತಿಯನ್ನು ಬೆನ್ನ ಹಿಂದೆ ಕಟ್ಟಿಕೊಂಡಿರುತ್ತಾರೆ. ಯಾರಾದರೂ ಅಂತಹ ವೇಳೆ ಸ್ವಾಮೀಜಿಗಳ ಬಳಿ ಏನೋ ದುಡ್ಡು ಇದೆ ಎಂದು ಕೊಲೆ ಮಾಡಿದರೇ ಯಾರು ಹೊಣೆ. ನಮಗೆ ಪಾದಯಾತ್ರೆ ಮಾಡಲು ಭಯವಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ಜೈನಮುನಿಗಳಿಗೆ ಪಾದಯಾತ್ರೆ ಮಾಡುವಾಗ ಸೂಕ್ತ ಭದ್ರತೆ ಜೊತೆಗೆ ಆಶ್ರಯ ಕಲ್ಪಿಸಬೇಕು ಎಂದು ಸರ್ಕಾರದ ಬಳಿ ನಮ್ಮ ಬೇಡಿಕೆ ಇಡಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ಸಾಧು ಸಂತರಿಗೆ ಸರ್ಕಾರ ರಕ್ಷಣೆ : ಕಾಮಕುಮಾರ ನಂದಿ ಮಹಾರಾಜ ಮುನಿಗಳಿಗೆ ಆದ ಸ್ಥಿತಿ ಬೇರೆ ಯಾರಿಗೂ ಬರಬಾರದು. ಈ ದೃಷ್ಟಿಯಿಂದ ಸರ್ಕಾರ ಜೈನ ಧರ್ಮದ ಮುನಿಗಳಿಗೆ ಭದ್ರತೆ ನೀಡಬೇಕು ಎಂದು ನಾಂದನಿ ಮಠದ ಜೀನಸೇನಾ ಭಟ್ಟಾರಕ ಹಾಗೂ ವರುಣಾ ಮಠದ ಧರ್ಮಸೇನಾ ಭಟ್ಟಾರಕ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದರು. ಇಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಬೆಟ್ಟದಲ್ಲಿ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಶ್ರೀಗಳು ಮಾಧ್ಯಮಗಳ ಜೊತೆ ಮಾತನಾಡಿದರು. ನಾವು ಕಷ್ಟ ಬಂದರು ಯಾರಿಗೂ ನೋಯಿಸದೆ ಜೀವನ ಮಾಡುತ್ತೇವೆ. ನಮಗೆ ಇವತ್ತು ಇಂತಹ ಕಷ್ಟ ಬಂದಿದೆ. ದೇಶ ಹಾಗು ರಾಜ್ಯದಲ್ಲಿ ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಸಾಧು ಸಂತರಿಗೆ ಸರ್ಕಾರ ರಕ್ಷಣೆ ನೀಡಬೇಕು. ಇಂತಹ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ :ಪಂಚಭೂತಗಳಲ್ಲಿ ಲೀನರಾದ ಜೈನ ಮುನಿ: ಜೈನ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ