ಹುಬ್ಬಳ್ಳಿ:ನಾನೊಬ್ಬ ಬಡಪಾಯಿ ಶೆಟ್ಟರ್. ಆದರೆ, ನನ್ನ ಮೇಲೆ ಬಿಜೆಪಿ ಸೋಲಿಸುವ ಅಭಿಯಾನ ಮಾಡುತ್ತಿದೆ. ಅಂತಿಮವಾಗಿ ಮೇ.10 ರಂದು ಜನತಾ ಕೋರ್ಟಿನಲ್ಲಿ ಸೋಲು-ಗೆಲುವು ನಿರ್ಧಾರ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಕೇವಲ ಹುಬ್ಬಳ್ಳಿಗೆ ಮಾತ್ರ ಸೀಮಿತವಲ್ಲ, ರಾಜ್ಯದ ಸೆಂಟ್ರಲ್ ಕ್ಷೇತ್ರವಾಗಿದೆ. ಅಷ್ಟೇ ಅಲ್ಲದೆ ರಾಷ್ಟ್ರಾದ್ಯಂತ ಕ್ಷೇತ್ರದ ವಿಷಯ ಚರ್ಚೆ ಆಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಬೇಕೆಂಬ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರು ಕೂಡಾ ಮಂಗಳವಾರ ಪ್ರಮುಖರ ಸಭೆ ನಡೆಸಿ ನನ್ನ ಸೋಲಿಸಲು ಆಂದೋಲನ ನಡೆಸಿದ್ದಾರೆ. ಯಾಕಿಷ್ಟು ಬಡಪಾಯಿ ಶೆಟ್ಟರ್ ಅವರನ್ನು ಸೋಲಿಸುವ ಗುರಿಯನ್ನು ಬಿಜೆಪಿ ಮಾಡಿಕೊಂಡಿದೆ ಗೊತ್ತಾಗುತ್ತಿಲ್ಲ ಎಂದರು.
ನಾನು ಅಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿಲ್ಲ, ನನ್ನಂತೆಯೇ ಆಯನೂರು ಮಂಜುನಾಥ, ಲಕ್ಷ್ಮಣ ಸವದಿ, ಯಲ್ಲಾಪುರದಲ್ಲಿ ಮಾಜಿ ಶಾಸಕ ಎನ್.ಆರ್.ಸಂತೋಷ್ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ. ಆದರೆ, ನಾನು ಯಾವುದೋ ಅಪರಾಧ ಮಾಡಿದಂತೆ ಎಲ್ಲರೂ ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಾನು ಬಿಜೆಪಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಈ ಹಿಂದೆಯೇ ಧರ್ಮೇಂದ್ರ ಪ್ರಧಾನ್ ಅವರು ನನ್ನೊಂದಿಗೆ ಚರ್ಚೆ ಮಾಡಿದ್ದರೆ, ಇಷ್ಟು ಮುಂದುವರೆಯುತ್ತಿರಲಿಲ್ಲವೇನೋ! ಸದ್ಯದ ಬೆಳವಣಿಯ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ವರಿಷ್ಠರು ರಾಜ್ಯಸಭಾ ಸದಸ್ಯರಾಗಿ ಮಾಡುತ್ತೇವೆ ಎಂದು ಹೇಳಿದ್ದರು. ಅದಕ್ಕೆ ಬೆಲೆ ಕೊಡದೇ ತತ್ವ ಸಿದ್ಧಾಂತಗಳಿಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವೆ. ಈ ಹಿಂದೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದಾಗಲೇ ತತ್ವ ಸಿದ್ಧಾಂತಗಳು ಮಣ್ಣುಪಾಲು ಆಗಿವೆ. ಹೀಗಾಗಿ ಇದೀಗ ನನ್ನ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಕಿಡಿಕಾರಿದರು.
ಈ ಹಿಂದೆ ಯಡಿಯೂರಪ್ಪನವರು ಬಿಜೆಪಿಯನ್ನು ಒಡೆದು ಕೆಜಿಪಿ ಪಕ್ಷ ಕಟ್ಟಿದ್ದರು. ಆಗ ಅವರ ತತ್ವ ಸಿದ್ಧಾಂತ ಎಲ್ಲಿಗೆ ಹೋಗಿತ್ತು? ಹೀಗಾಗಿ ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ಯಾವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ತ್ಯಜಿಸಿದ್ದೇನೆ ಎಂಬುದನ್ನು ಈಗಾಗಲೇ ತಿಳಿಸಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿ ಹೊರಗಡೆ ಬಂದಿದ್ದೇನೆ ಎಂದಷ್ಟೇ ಹೇಳಿದರು.