ಹುಬ್ಬಳ್ಳಿ: ಧಾರವಾಡ ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ನಡುವೆ ತಿಕ್ಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ನೀವೇ ಕುಳಿತು ಬಗೆಹರಿಸಿಕೊಳ್ಳಿ ಅಂತಾ ಸಲಹೆ ನೀಡಿದ್ದೇನೆ, ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಪೊಲೀಸ್ ಇಲಾಖೆ ತಿಕ್ಕಾಟ ವಿಚಾರ: ಅವರೇ ಕುಳಿತು ಬಗೆಹರಿಸಿಕೊಳ್ಳಲಿ ಎಂದು ಶೆಟ್ಟರ್ ಸಲಹೆ
ಶಾಲೆಗಳ ಆರಂಭ ಕುರಿತು ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸುವುದು ಬೇಡ ಅನ್ನೋದು ನನ್ನ ಅನಿಸಿಕೆ. ಮೊದಲು ಮಕ್ಕಳ ಪಾಲಕರ ಅಭಿಪ್ರಾಯ ಪಡೆದು ಈ ಕುರಿತು ತೀರ್ಮಾನಿಸಬೇಕು ಎಂದಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಹು-ಧಾ ಪೊಲೀಸ್ ಇಲಾಖೆಯ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಆಸ್ಪದ ಕೊಡಬಾರದು. ಆಡಳಿತ ವ್ಯವಸ್ಥೆಗೆ ಧಕ್ಕೆಯಾಗುತ್ತೆ, ಈ ಕುರಿತು ಸರ್ಕಾರ ಮಧ್ಯ ಪ್ರವೇಶಿಸಿದರೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಆದಷ್ಟು ಬೇಗ ಆಂತರಿಕ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಇನ್ನು ಶಾಲೆಗಳನ್ನು ಪ್ರಾರಂಭಿಸುವುದರ ಬಗ್ಗೆ ಪಾಲಕರ ಜೊತೆ ಚರ್ಚೆ ಮಾಡಿ ಅನಂತರ ವಿಚಾರ ಮಾಡುತ್ತೇವೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ದೇಶದಲ್ಲಿ ಶಾಲೆಗಳ ಪ್ರಾರಂಭ ಕುರಿತು ಚರ್ಚೆ ನಡೀತಾ ಇದೆ. ಪಾಲಕರಲ್ಲಿ ಸುರಕ್ಷತೆಯ ಭಾವನೆ ಮೂಡದೇ ಶಾಲೆಗಳನ್ನು ತೆರೆಯುವುದು ಸಾಧ್ಯವಿಲ್ಲ. ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸುವುದು ಬೇಡ ಅನ್ನೋದು ನನ್ನ ಅಭಿಪ್ರಾಯ. ಶಿಕ್ಷಣ ಸಚಿವರು ಸಿಎಂ ಜೊತೆ ಮಾತಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.