ಹುಬ್ಬಳ್ಳಿ:"ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ. ಆದರೆ ನಾನು ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ನನಗಾಗಿರುವ ಅಪಮಾನವನ್ನು ಇನ್ನೂ ಮರೆತಿಲ್ಲ" ಎಂದು ಕಾಂಗ್ರೆಸ್ ನಾಯಕ ಹಾಗು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಬಿಜೆಪಿ ತೊರೆದ ನಂತರ ಆಗಿರುವ ಹಾನಿ ಬಗ್ಗೆ ಅವರಿಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿದ್ದಾರೆ. ಆದರೆ ಪಕ್ಷದ ಮುಖಂಡರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ, ಈ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ನಾನು ಬಿಜೆಪಿಗೆ ಹಿಂದಿರುಗಿ ಹೋಗಲ್ಲ" ಎಂದರು.
ಸಿಎಂ ಸಿದ್ದರಾಮಯ್ಯ ಕುರಿತು ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಅನಂತ್ ಕುಮಾರ್ ಹೆಗಡೆ ಹದ್ದು ಮೀರಿ ವರ್ತಿಸುತ್ತಿದ್ದಾರೆ. ಲಕ್ಷ್ಮಣ ರೇಖೆ ದಾಟಿ ಮಾತನಾಡುತ್ತಿದ್ದಾರೆ. ಇಷ್ಟು ದಿನ ನಾಪತ್ತೆಯಾದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಜಿಲ್ಲೆಗೆ ಬಂದಾಗ ಇವರು ಎಲ್ಲಿ ಹೋಗಿದ್ದರು?. ಈಗ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿದ್ದವರ ಮೇಲೆ ಈ ರೀತಿ ಮಾತಾಡೋದು ಸರಿಯಲ್ಲ. ಪ್ರಧಾನಿ ಮೋದಿ ಬಗ್ಗೆ ಈ ರೀತಿ ಮಾತನಾಡಿದರೆ ಸುಮ್ಮನೆ ಇರುತ್ತಾರಾ" ಎಂದು ಶೆಟ್ಟರ್ ಪ್ರಶ್ನಿಸಿದರು.