ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ.. ಹುಬ್ಬಳ್ಳಿ:ಪಕ್ಷದರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿದ್ದಕ್ಕೆ ನಾನು ದೆಹಲಿಗೆ ತೆರಳುತ್ತಿದ್ದೇನೆ. ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ. ನಾನು ಪಾಸಿಟಿವ್ ಹೋಪ್‌ನಲ್ಲಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಕ್ಷದ ದೃಷ್ಟಿಯಿಂದ ಎಲ್ಲಾ ಒಳ್ಳೆಯದು ಆಗುತ್ತದೆ ಎಂದು ಹೋಗುತ್ತಿದ್ದೇನೆ. ಯಡಿಯೂರಪ್ಪ ಅವರನ್ನು ಭೇಟಿಯಾಗಬೇಕಿತ್ತು. ವಿಮಾನ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗಿ ಬಂದ ನಂತರ ಬಿಎಸ್‌ವೈ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಶೆಟ್ಟರ್ಗೆ ಹೈಕಮಾಂಡ್ ಬುಲಾವ್.. ಈಶ್ವರಪ್ಪ, ಸವದಿಗೆ ಬಿಎಸ್‌ವೈ ಕರೆ
ವರಿಷ್ಠರ ಭೇಟಿ ನಂತರ ನಿರ್ಧಾರ ಪ್ರಕಟ: ಯಾವುದೇ ಸ್ಥಾನಮಾನ ಇಲ್ಲದೆ 2 ವರ್ಷದಿಂದ ಪಕ್ಷದಲ್ಲಿದ್ದೇನೆ. ಯಾವುದೇ ಅಧಿಕಾರ ಇಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ. ಎಷ್ಟೋ ಕೆಲಸಗಳನ್ನು ನಮ್ಮ ಮಂತ್ರಿಗಳ ಮುಖಾಂತರ ಮಾಡಿಸಿದ್ದೇನೆ. ನಾನು ನಿವೃತ್ತಿ ಘೋಷಣೆ ಮಾಡಲು ಸಿದ್ಧನಿದ್ದೆ. ಆದರೆ ರಾಜಕಾರಣದಲ್ಲಿ ಗೌರವಯುತವಾಗಿ ಹೊರಗಡೆ ಹೋಗಬೇಕು. ನನ್ನ ಸಾಫ್ಟ್ ಕಾರ್ನರ್ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ವರಿಷ್ಠರ ಭೇಟಿ ನಂತರ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ ಎಂದು ಶೆಟ್ಟರ್ ಹೇಳಿದರು.
ಸೀನಿಯರ್ಸ್ ಎಂದರೆ ಯಾರು?. ವಯಸ್ಸೋ ಅಥವಾ ರಾಜಕಾರಣದಲ್ಲಿ ಸೀನಿಯರ್ಸೋ?. ಟಿಕೆಟ್ ಸಿಕ್ಕವರಲ್ಲಿ 75, 76 ವರ್ಷದವರು ಇದ್ದಾರೆ. ಅವರಿಗೆ ಸೀನಿಯರ್ಸ್ ಅನ್ನೋದಿಲ್ವಾ ನೀವು? ಎಂದು ಪ್ರಶ್ನಿಸಿದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ನಾಯಕರ ಭಾವನೆ ಮೇಲೆ ನನ್ನ ನಿರ್ಧಾರ ಅಡಗಿದೆ ಎಂದರು.
ಹೈಕಮಾಂಡ್ ಬುಲಾವ್: ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡುವಂತೆ ನಿರ್ದೇಶನ ನೀಡಿದ್ದರೂ ಚುನಾವಣೆಗೆ ಸ್ಪರ್ಧಿಸುವ ಕುರಿತು ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷದ ಹೈಕಮಾಂಡ್ ಬುಲಾವ್ ನೀಡಿದ್ದು, ವರಿಷ್ಠರ ಭೇಟಿಗೆ ದೆಹಲಿಗೆ ತೆರಳುತ್ತಿದ್ದಾರೆ. ಹಿರಿಯರಿಗೆ ಟಿಕೆಟ್ ನೀಡದೆ ಹೊಸಬರಿಗೆ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಟಿಕೆಟ್ ನೀಡುವ ನಿರ್ಧಾರದಿಂದಾಗಿ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುವಂತೆ ರಾಜ್ಯ ಬಿಜೆಪಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್ ಈಶ್ವರಪ್ಪಗೆ ಹೈಕಮಾಂಡ್ ಸಂದೇಶ ರವಾನಿಸಿತ್ತು. ಅದರಂತೆ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುವ ನಿರ್ಧಾರ ಪ್ರಕಟಿಸಿದರು. ಆದರೆ ಜಗದೀಶ್ ಶೆಟ್ಟರ್ ಮಾತ್ರ ಚುನಾವಣೆಗೆ ಸ್ಪರ್ಧಿಸುವ ಅಪೇಕ್ಷೆ ವ್ಯಕ್ತಪಡಿಸಿ ಮಾಧ್ಯಮಗೋಷ್ಟಿ ನಡೆಸುವ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದರು.
ಮೊದಲ ಪಟ್ಟಿ ರಿಲೀಸ್ ಆಗುತ್ತಿದ್ದಂತೆ ಮಂಗಳವಾರ ರಾತ್ರಿ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಜಗದೀಶ್ ಶೆಟ್ಟರ್ ಅವರು, ಈಗಾಗಲೇ ನನ್ನ ಸ್ಟ್ಯಾಂಡ್ಅನ್ನು ನಾನು ಹೇಳಿದ್ದೇನೆ. ನನಗೆ ಟಿಕೆಟ್ ಸಿಗೋ ಹೋಪ್ಸ್ ಇದೆ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಘೋಷಿಸಿದ್ದರು.
ಇದನ್ನೂ ಓದಿ: ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ಹೆಸರು ಕೈಬಿಟ್ಟ ಹೈಕಮಾಂಡ್ : ಶೆಟ್ಟರ್ ಇಂದು ದೆಹಲಿಗೆ ಪ್ರಯಾಣ