ಧಾರವಾಡ: ಬೆಂಗಳೂರಿನಲ್ಲಿ ರಾತ್ರೋರಾತ್ರಿ ಗಲಾಟೆ ಮಾಡಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಲಾಗಿದ್ದು, ಯಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅಂತವರ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಕರಣ ಇದಾಗಿದೆ. ಇವರಿಗೆಲ್ಲ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ನಾಲ್ಕೈದು ಸಾವಿರ ಜನ ಶಾಸಕರ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗಿ ದಾಳಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ದೂರು ನೀಡಬೇಕಿತ್ತು. ಕಾನೂನು ಹೋರಾಟ ಮಾಡಬೇಕಿತ್ತು. ಕಾನೂನು ಹೋರಾಟದ ಜೊತೆಗೆ ಪ್ರತಿಭಟನೆ ಸಹ ಮಾಡಬಹುದಿತ್ತು. ಹಲವು ದಾರಿಗಳಿದ್ದರೂ ಕಾನೂನು ಕೈಗೆ ತೆಗೆದುಕೊಂಡಿದ್ದು ಎಷ್ಟು ಸರಿ? ನಷ್ಟವನ್ನು ಗಲಾಟೆ ಮಾಡಿದ ವ್ಯಕ್ತಿಗಳಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕರ ಹಾಗೂ ಅಕ್ಕ-ಪಕ್ಕದವರ ಮನೆ ಹಾಳಾಗಿವೆ. ಪೊಲೀಸ್ ಠಾಣೆ ಹಾನಿಯಾಗಿದೆ. ಕೋಟ್ಯಾಂತರ ರೂ. ನಷ್ಟವಾಗಿದೆ. ಎಲ್ಲವನ್ನು ಸರ್ಕಾರವೇ ಭರಿಸಬೇಕಾ? ಹಾನಿ ಮಾಡಿದ ಜನರಿಂದಲೇ ನಷ್ಟ ಭರಿಸುವ ಕಾನೂನು ತರಬೇಕು. ಇಂತಹ ಕಾನೂನು ಬಂದ್ರೆ ಗಲಾಟೆ ಮಾಡುವವರಿಗೆ ಭಯ ಬರುತ್ತದೆ. ಅಂತಹ ಕಾನೂನು ತರಲು ಎಲ್ಲ ರೀತಿಯ ಪ್ರಯತ್ನ ಸರ್ಕಾರ ಮಾಡಲಿದೆ ಎಂಬ ಭರವಸೆ ನೀಡಿದರು.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗಲಾಟೆಗೆ ಸಂಬಂಧಿಸಿ ಕೆಲವು ಸಂಘಟನೆ ನಿಷೇಧ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ಗೃಹ ಇಲಾಖೆ ಅಧ್ಯಯನ ಮಾಡುತ್ತಿದೆ. ಇದರಲ್ಲಿ ನೇರವಾಗಿ ಯಾವುದಾದರೂ ಸಂಸ್ಥೆಗಳ ಕೈವಾಡವಿದ್ದರೆ ಅಂತಹ ಸಂಸ್ಥೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.