ಕರ್ನಾಟಕ

karnataka

ETV Bharat / state

ಕಮಲ ತೊರೆದು ಕೈ ಹಿಡಿದ ಸೋಲಿಲ್ಲದ ಸರದಾರನಿಗೆ ಶಿಷ್ಯನ ವಿರುದ್ಧ ಮುಖಭಂಗ

ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. 6 ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಪ್ರಬಲ ಲಿಂಗಾಯತ ನಾಯಕ ಈಗ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಶೆಟ್ಟರ್ ನಡೆದು ಬಂದ ಹಾದಿ ಕುರಿತ ವಿಶೇಷ ವರದಿ ಇಲ್ಲಿದೆ.

Jagadish Shettar
ಜಗದೀಶ್​ ಶೆಟ್ಟರ್​

By

Published : May 13, 2023, 2:27 PM IST

ಹುಬ್ಬಳ್ಳಿ:ಸುದೀರ್ಘ 40 ವರ್ಷಗಳ ಬಿಜೆಪಿ ಜೊತೆಗಿನ ಒಡನಾಟದಿಂದ ಹೊರಬಂದು ಕಾಂಗ್ರೆಸ್​ ಪಾಳಯವನ್ನು ಸೇರಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಇದೀಗ​ ಸುಮಾರು 32 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್​ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ್​ ಶೆಟ್ಟರ್​ ಅವರ ವಿರುದ್ಧ ಬಿಜೆಪಿಯಿಂದ ಶೆಟ್ಟರ್​ ಅವರ ಶಿಷ್ಯ ಮಹೇಶ್​ ಟೆಂಗಿನಕಾಯಿ ಕಣಕ್ಕಿಳಿದಿದ್ದರು.

ಚಿಕ್ಕ ವಯಸ್ಸಿನಿಂದಲೂ ಆರ್​ಎಸ್​ಎಸ್​‌, ಕಾಲೇಜು ಜೀವನದಲ್ಲಿ ಎಬಿವಿಪಿ ಅದಾದ ಬಳಿಕ ರಾಜಕೀಯ ಜೀವನದ ಉದ್ದಕ್ಕೂ ಬಿಜೆಪಿಯನ್ನೇ ಉಸಿರಾಗಿಸಿಕೊಂಡಿದ್ದರು. ಆದರೆ, ಈಗ ಸುದೀರ್ಘ 40 ವರ್ಷಗಳ ಕಾಲ ಬಿಜೆಪಿಯೊಂದಿಗಿನ ನಂಟು ಕಳಚಿಕೊಂಡು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಹೊಸ ರಾಜಕೀಯ ಜೀವನ ಆರಂಭಿಸಿದ್ದಾರೆ.

ಹೌದು ಪ್ರಸ್ತುತ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಅವರ ನಂತರ ರಾಜಕೀಯವಾಗಿ ಅಷ್ಟೇ ಸ್ಥಾನಮಾನ ಪಡೆದ ನಾಯಕ ಎಂದರೆ ಅದು ಜಗದೀಶ್ ಶೆಟ್ಟರ್. ಸತತ ಆರು ಬಾರಿ ಗೆದ್ದು 3 ದಶಕದ ಕಾಲ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದ ಪಕ್ಷದ ಹಿರಿಯ ರಾಜಕಾರಣಿ ಇತ್ತೀಚೆಗೆ ಪಕ್ಷ ತೊರೆದಿದ್ದರು. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಶೆಟ್ಟರ್, ಹೈಕಮಾಂಡ್ ರಾಜಕೀಯ ದಾಳದ ವಿರುದ್ಧ ಬಂಡೆದ್ದು ಕಾಂಗ್ರೆಸ್​ ಸೇರಿದ್ದರು.

ಕಟ್ಟಾ ಬಿಜೆಪಿ ನಾಯಕನಾಗಿದ್ದ ಜಗದೀಶ್ ಶೆಟ್ಟರ್‌ 6 ಬಾರಿ ಬಿಜೆಪಿಯಿಂದ ಶಾಸಕರಾಗಿದ್ದು, ಏಳನೇ ಬಾರಿಯ ಸ್ಪರ್ಧೆಗೆ ಬಿಜೆಪಿಯಲ್ಲಿ ಅವಕಾಶ ಸಿಗದೇ ಈಗ ಕಾಂಗ್ರೆಸ್‌ ಕೈ ಹಿಡಿದಿದ್ದರು. ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷ ಸ್ಥಾನದಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಹುದ್ದೆಯವರೆಗೆ ಬಹು ಮುಖ್ಯ ಜವಾಬ್ದಾರಿಗಳನ್ನು ನಿಭಾಯಿಸಿದ ಶೆಟ್ಟರ್​ ಸಜ್ಜನ ರಾಜಕಾರಣಿಯಾಗಿ, ಉತ್ತಮ ಆಡಳಿತಗಾರನಾಗಿ, ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಭಾವದೊಂದಿಗೆ ಗಮನ ಸೆಳೆದವರು.

ಮೊದಲ ಜನಸಂಘದ ಮೇಯರ್:ಲಿಂಗಾಯತರ ಬಣಜಿಗ ಉಪಪಂಗಡಕ್ಕೆ ಸೇರಿದ ಶೆಟ್ಟರ್ ಇಡೀ ಕುಟುಂಬವೇ ಸಂಘ ನಿಷ್ಠ. 1955ರ ಡಿಸೆಂಬರ್‌ 17ರಂದು ಈಗಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಕೆರೂರು ಗ್ರಾಮದಲ್ಲಿ ಶೆಟ್ಟರ್​ ಜನಿಸಿದರು. ಈಗ ಅವರಿಗೆ 67 ವರ್ಷ. ಇವರ ತಂದೆ ಶಿವಪ್ಪ ಎಸ್‌.ಶೆಟ್ಟರ್‌ ಮತ್ತು ತಾಯಿ ಬಸವಣ್ಯಮ್ಮ. ತಂದೆಯ ಅವರ ಕಾಲದಿಂದಲೇ ಶೆಟ್ಟರ್‌ ಕುಟುಂಬ ಸಂಘ ನಿಷ್ಠೆಯನ್ನು ಹೊಂದಿತ್ತು. ಎಸ್‌.ಎಸ್‌ ಶೆಟ್ಟರ್‌ ಅವರು ಜನಸಂಘದ ಹಿರಿಯ ನಾಯಕರಾಗಿದ್ದರು. ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 5 ಬಾರಿ ಆಯ್ಕೆಯಾಗಿದ್ದರು. ಮಾತ್ರವಲ್ಲದೇ ಹುಬ್ಬಳ್ಳಿ-ಧಾರವಾಡದ 'ಮೊದಲ ಜನಸಂಘದ ಮೇಯರ್' ಎಂಬ ಹೆಗ್ಗಳಿಕೆಯೂ ಅವರಿಗಿದೆ. ಇನ್ನು ಇವರ ಇವರ ಚಿಕ್ಕಪ್ಪ ಸದಾಶಿವ ಶೆಟ್ಟರ್‌ ಅವರು 1967ರಲ್ಲಿ ಹುಬ್ಬಳ್ಳಿ ನಗರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ದಕ್ಷಿಣ ಭಾರತದಲ್ಲಿ ವಿಧಾನಸಭೆಗೆ ಮೊದಲ ಜನಸಂಘದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

20 ವರ್ಷಗಳ ಕಾಲ ವಕೀಲನಾಗಿ ಸೇವೆ: ಶೆಟ್ಟರ್‌ ಅವರು ಬಿಕಾಂ ಪದವೀಧರರು. ಬಳಿಕ ಎಲ್‌ಎಲ್‌ಬಿ ಮಾಡಿ 20 ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿ ವಕೀಲ ವೃತ್ತಿ ನಡೆಸಿದ್ದಾರೆ. ಪತ್ನಿ ಶಿಲ್ಪಾ ಶೆಟ್ಟರ್‌. ಈ ದಂಪತಿಗೆ ಪ್ರಶಾಂತ್ ಮತ್ತು ಸಂಕಲ್ಪ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಶೆಟ್ಟರ್​ ರಾಜಕೀಯ ಜೀವನ: 1994ರಲ್ಲಿ ಮೊದಲ ಬಾರಿಗೆ ರಾಜ್ಯ ವಿಧಾನ ಸಭೆಗೆ ಆಯ್ಕೆಯಾದ ಶೆಟ್ಟರ್‌ ಬಳಿಕ 1999, 2004, 2008, 2013, 2018 ಹೀಗೆ ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಅವರು ವಿರೋಧ ಪಕ್ಷದ ನಾಯಕರಾಗಿ, ಸ್ಪೀಕರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಹಲವು ಖಾತೆಗಳನ್ನು ನಿಭಾಯಿಸಿದ ಇವರು ಕೊನೆಗೆ 10 ತಿಂಗಳ ಕಾಲ ಮುಖ್ಯಮಂತ್ರಿ ಆಗಿಯೂ ಆಡಳಿತ ನಡೆಸಿದ್ದಾರೆ.

ವಿರೋಧ ಪಕ್ಷದ ನಾಯಕ: ಆರ್‌ಎಸ್‌ಎಸ್ ಮೂಲಕ ರಾಜಕೀಯಕ್ಕೆ ಬಂದ ಶೆಟ್ಟರ್ 1990ರಲ್ಲಿ ಹುಬ್ಬಳ್ಳಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕವಾದರು. 1994ರಲ್ಲಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದರು. ಅದೇ ವರ್ಷ ಮೊದಲ ಬಾರಿ ಶಾಸಕರಾದರು. 1999ರಲ್ಲಿ ಗೆಲುವು ಸಾಧಿಸಿದ ಅವರು ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದರು. 2006ರಲ್ಲಿ ಬಿಜೆಪಿ-ಜೆಡಿಎಸ್‌ 20-20 ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು 20 ತಿಂಗಳು ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು. ಮುಂದೆ 2008ರಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಾಗ ಶೆಟ್ಟರ್‌ ಅವರು ಸ್ಪೀಕರ್‌ ಪಟ್ಟ ಅಲಂಕರಿಸಿದ್ದರು.

ರಾಜ್ಯದ 21ನೇ ಮುಖ್ಯಮಂತ್ರಿ: ಮಧ್ಯೆ 2009ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದರು. ಈ ನಡುವೆ ಬಿ.ಎಸ್‌ ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದು ಅವರು ರಾಜೀನಾಮೆ ನೀಡಿದಾಗ ಡಿ.ವಿ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದರು. ಆದರೆ ಪಕ್ಷಕ್ಕೆ ಅವರು ಸರಿಹೋಗದೇ ಇದ್ದಾಗ ಪಾರ್ಟ್‌ಟೈಮ್‌ ಚೀಫ್‌ ಮಿನಿಸ್ಟರ್‌ ಆಗಿ ಗಾದಿಗೆ ಏರಿದರು. ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಅವರು ಆಡಳಿತ ಮಾಡಿದ್ದು 10 ತಿಂಗಳು ಮಾತ್ರ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಗದೀಶ್‌ ಶೆಟ್ಟರ್‌ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿತು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ, 2019ರಲ್ಲಿ ಆಪರೇಷನ್‌ ಕಮಲದ ಬಳಿಕ ಅಸ್ತಿತ್ವಕ್ಕೆ ಬಂದಾಗ ಹಿಂದೆ ತಾನು ಸಿಎಂ ಆಗಿದ್ದೆ ಎಂಬ ಹಮ್ಮು ತೋರದೇ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಖಾತೆಯನ್ನು ನಿಭಾಯಿಸಿದ್ದರು. ಮುಂದೆ 2021ರ ಜುಲೈನಲ್ಲಿ ಯಡಿಯೂರಪ್ಪ ಅವರು ಸಿಎಂ ಗಾದಿಯಿಂದ ಇಳಿದು ಬಸವರಾಜ ಬೊಮ್ಮಾಯಿ ಅವರು ಸಿಎಂ ಆದಾಗ ತನಗಿನ್ನು ಸಚಿವ ಖಾತೆಗಳು ಬೇಡ ಎಂದಿದ್ದರು.

ಇತಿಹಾಸ ಸೃಷ್ಟಿಸುವ ಹಂಬಲದಲ್ಲಿದ್ದ ಶೆಟ್ಟರ್​:2023ರ ಚುನಾವಣೆಗೆ ಸಜ್ಜುಗೊಳ್ಳುತ್ತಿದ್ದ ಜಗದೀಶ್‌ ಶೆಟ್ಟರ್‌ ಅವರಿಗೆ ಹೈಕಮಾಂಡ್‌ ಇನ್ನು ನಿಮ್ಮ ಸ್ಪರ್ಧೆ ಸಾಕು ಎಂದು ಹೇಳಿದ್ದು ಆಘಾತವನ್ನು ತಂದಿತ್ತು. ತನಗಿನ್ನೂ 67 ವರ್ಷ. ಇನ್ನೂ ಸಾಕಷ್ಟು ರಾಜಕೀಯ ಭವಿಷ್ಯವಿದೆ ಎಂದು ತಿಳಿದಿದ್ದ ಶೆಟ್ಟರ್‌ ನನಗೇನೂ ಬೇಡ, ಶಾಸಕನಾಗಿ ಉಳಿಯುತ್ತೇನೆ ಎಂದು ಹೇಳಿದ್ದರು. ಆದರೆ ಪಕ್ಷ ಅದಕ್ಕೆ ಒಪ್ಪಿರಲಿಲ್ಲ. ಯಾವಾಗ ನೀವಿನ್ನು ಸ್ಪರ್ಧಿಸುವುದು ಬೇಡ, ನಿವೃತ್ತಿ ಘೋಷಿಸಿ ಯುವಕರಿಗೆ ಅವಕಾಶ ಕೊಡಿ ಎಂದು ಹೈಕಮಾಂಡ್‌ ಹೇಳಿತೋ ಆಗ ಶೆಟ್ಟರ್‌ ಬಂಡಾಯವೆದ್ದಿದ್ದರು. ತಾವು ಕೇಳಿದ ಪ್ರಶ್ನೆಗಳಿಗೆ ಹೈಕಮಾಂಡ್​ನಿಂದ ಉತ್ತರ ಸಿಗದ ಹಿನ್ನೆಲೆ ಜಗದೀಶ್‌ ಶೆಟ್ಟರ್‌ ಅವರು ತಾನೇ ಕಟ್ಟಿ ಬೆಳೆಸಿದ ಪಕ್ಷದಿಂದ ದೂರ ಸರಿದು ಕಾಂಗ್ರೆಸ್​​ನಿಂದ ಕಣಕ್ಕೆ ಇಳಿದು ಹೊಸ ಇತಿಹಾಸ ಸೃಷ್ಟಿಸುವ ಹಂಬಲದಲ್ಲಿದ್ದರು. ಆದರೆ ಈಗ ಆ ಕನಸುಗಳೆಲ್ಲವನ್ನು ನನಸು ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:ಕ್ಷೇತ್ರಕ್ಕೆ ಕಾಲಿಡದೇ ಗೆದ್ದ ಕೈ ಅಭ್ಯರ್ಥಿ: ಭರ್ಜರಿ ಗೆಲುವು ದಾಖಲಿಸಿದ ವಿನಯ್​ ಕುಲಕರ್ಣಿ!

ABOUT THE AUTHOR

...view details