ಕರ್ನಾಟಕ

karnataka

ETV Bharat / state

'ನನಗೆ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್​ ಕಾರಣ.. ಮಾನಸ ಪುತ್ರನ ಮೇಲಿನ ಪ್ರೇಮಕ್ಕೆ ನನ್ನ ಬಲಿ ಕೊಟ್ಟರು'

ಟಿಕೆಟ್ ನಿರಾಕರಣೆ ಮಾತ್ರ ಬಿಜೆಪಿ ಬಿಡಲು ಕಾರಣವಲ್ಲ. ಈ ಹಿಂದೆ ನಡೆದ ಕಹಿ ಘಟನೆಗಳು ಪಕ್ಷ ಬಿಡಲು ಕಾರಣ-ಜಗದೀಶ್​ ಶೆಟ್ಟರ್​

Jagadish Shettar
ಜಗದೀಶ್​ ಶೆಟ್ಟರ್​

By

Published : Apr 18, 2023, 12:06 PM IST

Updated : Apr 18, 2023, 4:07 PM IST

ತುರ್ತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ:ನನಗೆ ಸೆಂಟ್ರಲ್ ಕ್ಷೇತ್ರದ ಟಿಕೆಟ್ ತಪ್ಪಲು ಮೂಲ ಕಾರಣ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್. ತಮ್ಮ ಮಾನಸ ಪುತ್ರ ಮಹೇಶ್​ ಟೆಂಗಿನಕಾಯಿಗೆ ಟಿಕೆಟ್ ಕೊಡಿಸಲು ನನ್ನ ಟಿಕೆಟ್​ ತಪ್ಪಿಸಿದ್ದಾರೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ನಗರದಲ್ಲಿಂದು ತುರ್ತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಟಿಕೆಟ್ ಘೋಷಣೆಯಾಯಿತು. ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ಕೊಟ್ಟರು. ಅವರಿಗೆ ಕೊಡೋದಕ್ಕೆ ಬೇಡ ಅನ್ನೋಲ್ಲ. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬಹುದಿತ್ತು‌. ಆದರೆ ಬಿ ಎಲ್ ಸಂತೋಷ್ ಮಾನಸ ಪುತ್ರ ನಮ್ಮ ವಿರುದ್ಧ ಷಡ್ಯಂತ್ರ ರೂಪಿಸುತ್ತಾ ಬಂದರು. ಆರು ತಿಂಗಳಿನಿಂದ ಟಿಕೆಟ್ ಸಿಗಲ್ಲ ಅಂತಾ ಅಪಪ್ರಚಾರ ಮಾಡಿದರು. ಮಾನಸ ಪುತ್ರನ ಬಗೆಗಿನ ಮಮತೆ, ಮಮಕಾರ ಇಷ್ಟಕ್ಕೆಲ್ಲ ಕಾರಣ. ಒಬ್ಬ ವ್ಯಕ್ತಿಗಾಗಿ ನನಗೆ ಅಪಮಾನ ಮಾಡಿದ್ರು. ನನ್ನ ಬದಲಿಗೆ ಮಾನಸ ಪುತ್ರನನ್ನೇ ರಾಜ್ಯಸಭಾ ಸದಸ್ಯನನ್ನಾಗಿ ಮಾಡಬಹುದಾಗಿತ್ತು. ಒಬ್ಬ ವ್ಯಕ್ತಿ ಟಿಕೆಟ್​​ಗಾಗಿ ಇಷ್ಟೆಲ್ಲಾ ಮಾಡಬೇಕಿತ್ತಾ?. ಸಂತೋಷ್ ಪ್ರಿ ಪ್ಲಾನ್​ನಿಂದ ಇಷ್ಟೆಲ್ಲಾ ನಡೆದಿದೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.

ಅವರು ಹೇಳಿದಂತೆ ನಾನು ಒಪ್ಪದೇ ಇದ್ದಾಗ ನನ್ನನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಕರೆಯಿಸಿದರು. ಆಗ ಮನವೊಲಿಕೆಯ ಪ್ರಕ್ರಿಯೆ ಆರಭವಾಯಿತು. ರಾಜ್ಯಸಭಾ ಸದಸ್ಯರನ್ನಾಗಿ ಮಾಡೋದಾಗಿ ಹೇಳಿದರು. ಅದಕ್ಕೂ ಮುಂಚೆ ಏಕೆ ಹೇಳಲಿಲ್ಲ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರೂ ಬಂದಿದ್ದರು. ಇದರ ಹಿಂದೆ ಯಾರದೋ ಕುತಂತ್ರವಿದೆ ಅಂತಾ ಅನಿಸಿತು. ಹೈಕಮಾಂಡ್​​ಗೆ ಕಳಿಸಿದ ಪಟ್ಟಿಯಲ್ಲಿ ನನ್ನದು ಒಂದೇ ಹೆಸರಿತ್ತು. ಆದ್ರೆ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬರಲಿಲ್ಲ. ಧರ್ಮೇಂದ್ರ ಪ್ರಧಾನ್ ಫೋನ್ ಮಾಡಿ ಟಿಕೆಟ್ ಕೊಡಲ್ಲ‌ ಅಂತಾರೆ. ಒಂದು ಫಾರ್ಮೆಟ್ ಕಳಿಸ್ತೇವೆ. ಅದಕ್ಕೆ ಸಹಿ ಹಾಕಿ ಕಳಿಸಿ ಅಂದರು. ಚಿಕ್ಕ ಹುಡುಗನಿಗೆ ಹೇಳಿದಂತೆ ಟಿಕೆಟ್ ಇಲ್ಲ ಎಂದು ಹೇಳಿ ನನಗೆ ಅಪಮಾನ ಮಾಡಿದ್ರು. ಒಬಿಡಿಯಂಟ್ ಇದಾರೆ. ಸುಮ್ಮನೇ ಒಪ್ಪಿಕೊಳ್ತಾರೆ ಅಂತಾ ಲೆಕ್ಕ ಹಾಕಿದರು. ಇದು ಟಿಕೆಟ್ ಪ್ರಶ್ನೆಯಲ್ಲ. ನನ್ನ ಮರ್ಯಾದೆ ಪ್ರಶ್ನೆ. ಪಕ್ಷ ಕಟ್ಟಿದವರನ್ನು ಒದ್ದು ಹೊರಗೆ ಹಾಕೋದು ಅಂದ್ರೇನು‌? ಎಂದು ಶೆಟ್ಟರ್ ಪ್ರಶ್ನಿಸಿದರು.

ಒಂದೊಂದೇ ಸೀಟನ್ನು ಬಿಜೆಪಿ ಕಳೆದುಕೊಳ್ಳುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಬೇಕೋ ಬೇಡವೋ ಅನ್ನೋ ಪ್ರಶ್ನೆ ಕಾಡ್ತಾ ಇದೆ. ಇದೇ ಬಿ ಎಲ್ ಸಂತೋಷ್​​ ಅವರನ್ನು ಬೇರೆ ರಾಜ್ಯಗಳಲ್ಲಿ ಉಸ್ತುವಾರಿ ಮಾಡಿದರು. ಎಲ್ಲಿಯೂ ಬಿಜೆಪಿ ನಿರೀಕ್ಷಿತ ಸೀಟು ಗೆಲ್ಲಲಿಲ್ಲ. ಇಷ್ಟೆಲ್ಲಾ ಆದರೂ ಕರ್ನಾಟಕದ ಉಸ್ತುವಾರಿ ನೀಡಿದ್ದಾರೆ. ಪಕ್ಷ ಹಾಳು ಮಾಡಲಿಕ್ಕೆಂದೇ ಈ ರೀತಿ ಮಾಡಿದ್ದಾರೆ ಎಂದರು.

ಸಂತೋಷ್ ವಿರುದ್ಧ ಶೆಟ್ಟರ್ ಕಿಡಿ:ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಅಂತಾರೆ. ಆದ್ರೆ ಇಲ್ಲ, ಇಲ್ಲಿ ಒಬ್ಬನೇ ವ್ಯಕ್ತಿ ಮುಖ್ಯವಾಗಿದ್ದಾನೆ. ಬಿಜೆಪಿ ಕಚೇರಿಯನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದಾನೆ‌. ನಿರ್ಮಲ್​ಕುಮಾರ್ ಸುರಾನಾ ಈಗ ಎಂಎಲ್​​ಸಿ. ಯಡಿಯೂರಪ್ಪ ಸಿಎಂ ಆದ ಮೇಲೆ ಆತನನ್ನು ಕಚೇರಿಯೊಳಗೆ ಬಿಟ್ಟುಕೊಂಡಿದ್ದಾನೆ. ಪ್ರತಿ ಜಿಲ್ಲೆಯಲ್ಲಿಯೂ ಗುಂಪುಗಾರಿಕೆ ಮಾಡಿದ್ದಾನೆ. ರಾಮದಾಸ್ ಸಂತೋಷ್ ಆಪ್ತನಲ್ಲ. ಹಾಗಾಗಿ ಆತನಿಗೆ ಟಿಕೆಟ್ ಸಿಗಲಿಲ್ಲ. ಶ್ರೀವತ್ಸ ಅನ್ನೋರಿಗೆ ಟಿಕೆಟ್ ಕೊಟ್ಟರು. ಅವರು ಗೆದ್ದು ಬರ್ತಾರಾ? ಬೇರೆ ಕ್ಷೇತ್ರಗಳಲ್ಲಿಯೂ ಇದೇ ರೀತಿ ಮಾಡಿದ್ದಾರೆ ಎಂದು ಬಿ.ಎಲ್.ಸಂತೋಷ್ ವಿರುದ್ಧ ಏಕವನಚದಲ್ಲೇ ಶೆಟ್ಟರ್​ ಹರಿಹಾಯ್ದರು‌.

ಅಣ್ಣಾಮಲೈ ವಿರುದ್ಧ ಅಸಮಾಧಾನ:ಇಡೀ ರಾಜ್ಯ ಬಿಜೆಪಿ ಕೆಲವರ ಕಪಿಮುಷ್ಟಿಯಲ್ಲಿದೆ. ಅಣ್ಣಾಮಲೈ ವಿಆರ್​​ಎಸ್ ತಗೊಂಡು ತಮಿಳುನಾಡಿನಲ್ಲಿ ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ರು. ಅಲ್ಲೇನು ಉತ್ತಮ ಫಲಿತಾಂಶ ಬರಲಿಲ್ಲ. ಒಂದೂ ಚುನಾವಣೆಯಲ್ಲಿ ಗೆಲ್ಲಲಾರದವರನ್ನು ಚುನಾವಣಾ ಉಸ್ತುವಾರಿ ಮಾಡಿದ್ದಾರೆ. ಅವರ ಎದುರು ಸಭೆಗಳಲ್ಲಿ ನಾವು ಹಿಂದಿನ‌ ಸಾಲಿನಲ್ಲಿ ಕೂರಬೇಕು ಎಂದು ಅಸಮಾಧಾನ ಹೊರ ಹಾಕಿದರು.

ಆತ್ಮಾಭಿಮಾನಕ್ಕೆ ಧಕ್ಕೆ:ಎಲ್ಲವನ್ನೂ ಸಹಿಸಿಕೊಂಡು ಬಂದೆ. ಆತ್ಮಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಬಿಜೆಪಿಯಿಂದ ಹೊರಬಂದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಸಹ ಸಂತೋಷ್​ರ ಮನುಷ್ಯ. ಕೋರ್ ಕಮಿಟಿಯಲ್ಲಿ ಸೇರಿಸಿದ್ದೇ ಸಂತೋಷ್. ಸಂತೋಷ್​​ ಹೇಳಿದಂತೆ ಕಟೀಲ್ ನಡೆದುಕೊಳ್ಳುತ್ತಿದ್ದಾರೆ. ಹಲವು ತಿಂಗಳ ಹಿಂದೆ ಆಡಿಯೋ ವೈರಲ್ ಆಗಿತ್ತು. ಆ ಮಾತು ಸಂತೋಷ್ ಅವರ ಗೇಮ್ ಪ್ಲಾನ್. ಈಗ ವರ್ಕೌಟ್ ಆಗಿದೆ. ಮಾನಸ ಪುತ್ರನಿಗೆ ಟಿಕೆಟ್ ಕೊಡಲು ಗೆಲ್ಲುವ ಅಭ್ಯರ್ಥಿಯಾದ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಈಗ ನಾನು ಕಾಂಗ್ರೆಸ್​​ಗೆ ಸೇರಿದ್ದೇನೆ. ಜನ ಬೆಂಬಲವೂ ಸಿಗುತ್ತಿದೆ ಎಂದರು.

ವ್ಯವಸ್ಥಿತವಾಗಿ ಹೊರ ಹಾಕಿದರು: ಪ್ರಹ್ಲಾದ್ ಜೋಶಿ ಅವರಿಗೂ ಹೇಳಿದ್ದೆ. ನಾನು ಸ್ಪೀಕರ್ ಇದ್ದಾಗ ನನ್ನ ಪತ್ನಿ ಜೋಶಿ ತಮ್ಮ ಪಾತ್ರ ಇಲ್ಲ ಅನ್ನೋದಾದ್ರೆ ಜೋಶಿ ಗಟ್ಟಿಯಾಗಿ ಹೇಳಬಹುದಾಗಿತ್ತು. ನಂಬರ್ ಒನ್, ನಂಬರ್ ಟು ಗೆ ನೀವು ಆಪ್ತರು. ನಿಮ್ಮನ್ನು ಗೆಲ್ಲಿಸಲು ಶ್ರಮಿಸಿದ್ದೇನೆ. ಆದ್ರೆ ನೀವೇಕೆ ನಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲಲ್ಲ. ಪ್ರಯತ್ನ ಮಾಡೀವಿ ಎಂದರು. ಬೊಮ್ಮಾಯಿ ಅವರೂ ಅದನ್ನೇ ಹೇಳಿದರು. ಇವರೆಲ್ಲರ ವರ್ತನೆಯಿಂದ ಬೇಸತ್ತು ಬಿಜೆಪಿಯಿಂದ ಹೊರಬಂದೆ. ನಾನು ಕಟ್ಟಿದ ಮನೆಯಿಂದ ವ್ಯವಸ್ಥಿತವಾಗಿ ಹೊರ ಹಾಕಿದರು. ಸಾಮಾಜಿಕ‌ ಜಾಲತಾಣದಲ್ಲಿ ನನ್ನ ಬಗ್ಗೆ ಇದು ನನ್ನ ಕೊನೆಯ ಚುನಾವಣೆ ಅಗೌರವದಿಂದ ನಿವೃತ್ತಿಯಾಗಬಾರದೆಂದು ಕಾಂಗ್ರೆಸ್ ಗೆ ಹೋದೆ ಎಂದರು.

ಬಿಜೆಪಿಯನ್ನು ಮುಗಿಸೋ ಷಡ್ಯಂತ್ರ: ಈಗಿನ ಪರಿಸ್ಥಿತಿ ಬಗ್ಗೆ ಬಿಜೆಪಿ ವರಷ್ಠರ ಗಮನಕ್ಕೆ ತಂದರೂ ರಿಪೇರಿ ಕೆಲಸ ನಡೆಯಲಿಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಮುಗಿಸೋ ಷಡ್ಯಂತ್ರ ನಡೆದಿದೆ. ನಾನು ಈಗಾಗಲೇ ಕಾಂಗ್ರೆಸ್ ಸೇರಿದ್ದೇನೆ. ಕಾಂಗ್ರೆಸ್ ಕೊಡುವ ಜವಾಬ್ದಾರಿ ನಿರ್ವಹಿಸ್ತೇನೆ.‌ ಸುರೇಶ್ ಕುಮಾರ್ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಅವರು ಗೆದ್ದು ಬರಲಿ. ವಿಶ್ವೇಶ್ವರ ಹೆಗಡೆ ಕಾಗೇರಿಗೂ ಟಿಕೇಟ್ ತಪ್ಪಿಸೋ ಕೆಲಸ ನಡೀತು. ಕೊನೆಯ ಘಳಿಗೆಯಲ್ಲಿ ಟಿಕೆಟ್ ಕೊಟ್ಟರು. ಮಾನಸ ಪುತ್ರನ ಮೇಲಿನ ಪ್ರೀತಿ ವಿಶ್ವಾಸದ ಒಂದು ಪರ್ಸೆಂಟೇಜ್ ನನಗೆ ಕೊಡಲಿಲ್ಲ. ಕಾಂಗ್ರೆಸ್​ನ್ನು ಗೆಲ್ಲಿಸಿ ಅಧಿಕಾರಕ್ಕೆ ತರೋದು ನನ್ನ ಗುರಿ ಎಂದರು.

ಯಡಿಯೂರಪ್ಪ ಸಹ ಅಸಹಾಯಕರಾಗಿದ್ದಾರೆ. ಬಿಜೆಪಿಯಲ್ಲಿ ಪಕ್ಷ ನಿಷ್ಠೆಯಿಲ್ಲ. ಕೇವಲ ವ್ಯಕ್ತಿ ನಿಷ್ಠೆ, ಜೋಶಿ ಮತ್ತು ಬೊಮ್ಮಾಯಿ ನನ್ನ ಟಿಕೆಗಾಗಿ ಸೀರಿಯಸ್ ಆಗಿ ಪ್ರಯತ್ನಿಸಲಿಲ್ಲ‌. ಪದೇ ಪದೇ ಅಪಮಾನ ವಿಚಾರ ಸಂಬಂಧಪಟ್ಟವರಿಗೆ ಹೇಳಿದೆ. ಆದರೆ ಅದನ್ನು ಸರಿಪಡಿಸಲಿಲ್ಲ. ಜೋಶಿ ಸಹ ಬಿ.ಎಲ್.ಸಂತೋಷ್ ಆಪ್ತರು. ಹಾಗಂತ ಅವರೂ ಷಡ್ಯಂತ್ರ ಮಾಡಿದ್ದಾರೆ ಅಂತಾ ಹೇಳಲ್ಲ. ಎಲ್ಲಾ ಜಿಲ್ಲೆಗಳಲ್ಲಿಯೂ ಉಸಿರುಗಟ್ಟುವ ವಾತಾವರಣವಿದೆ ಎಂದರು.

ಹೈಕಮಾಂಡ್ ಡೈರೆಕ್ಷನ್​​ನಂತೆ ಹೇಳಿಕೆ: ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಡೈರೆಕ್ಷನ್​​ನಂತೆ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಅವರ ಮಗನಿಗೆ ಟಿಕೆಟ್ ಘೊಷಣೆಯಾಗಲಿದ್ದು, ಇದೆಲ್ಲಕ್ಕೂ ಉತ್ತರ ಸಿಗುತ್ತದೆ. ಸಜ್ಜನರ ಸಂಘ ಬಿಟ್ಟು ದುರ್ಜನ ಸಂಘ ಬಯಸಿದ್ದಾರೆ.

ಶೆಟ್ಟರ್ ವಿರುದ್ಧ ಘಟಾನುಗಟಿಗಳ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ಶಕ್ತಿ ಜಗತ್ತಿಗೆ ಗೊತ್ತಾಗಲಿ. ನಾನು ಗೆಲ್ಲೋ‌ ಮೂಲಕ ನನ್ನ ಶಕ್ತಿ ಏನಂತ ತೋರಿಸುತ್ತೇನೆ. ದೆಹಲಿಯಿಂದ ಕಳಿಸೋ ಹೆಸರೇ ಸಿಎಂ ಆಗ್ತಾರೆ. ನನಗೆ ರಾಷ್ಟ್ರ ರಾಜಕಾರಣದಲ್ಲಿ ಇಷ್ಟವಿಲ್ಲ. ನಾನು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತೇನೆ. ಸದ್ಯ ವಿಧಾನಸಭೆಗೆ ಸ್ಪರ್ಧಿಸುತ್ತೇನೆ. ಲೋಕಸಭೆ ಕುರಿತು ಸ್ಪರ್ಧೆ ಬಗ್ಗೆ ಮುಂದೆ ಹೇಳುತ್ತೇನೆ. ಡ್ಯಾಮೇಜ್ ಡ್ಯಾಮೇಜೇ.. ನಡ್ಡಾ ಬರಲಿ, ಯಾರೇ ಬರಲಿ ಡ್ಯಾಮೇಜ್ ಕಂಟ್ರೋಲ್ ಆಗಲ್ಲ ಎಂದರು.

ಇದನ್ನೂ ಓದಿ:3ನೇ ಪಟ್ಟಿಯಲ್ಲಿ 3 ಕುಟುಂಬಕ್ಕೆ ಬಿಜೆಪಿ ಟಿಕೆಟ್: ಶೆಟ್ಟರ್ ಜಾಗಕ್ಕೆ ಟೆಂಗಿನಕಾಯಿಗೆ ಛಾನ್ಸ್‌

Last Updated : Apr 18, 2023, 4:07 PM IST

ABOUT THE AUTHOR

...view details