ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ಆಯೋಜಿಸಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗಿಯಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ರೆ ಕಾರ್ಯಕ್ರಮದ ಪರಿಶೀಲನೆ ನಡೆಸಿದ ಹುಬ್ಬಳ್ಳಿ ಕೇಂದ್ರ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಸ್ಥಾನವೇ ಇಲ್ಲ!
ಹೌದು, ಮಹಾನಗರ ಪಾಲಿಕೆ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಜೊತೆ ವೇದಿಕೆಯಲ್ಲಿ ಕುಳಿತುಕೊಳ್ಳುವ ಗಣ್ಯರ ಪಟ್ಟಿಯಲ್ಲಿ ಶೆಟ್ಟರ್ಗೆ ಅವಕಾಶ ನೀಡಿಲ್ಲ. ವೇದಿಕೆಯಲ್ಲಿ ಒಂಭತ್ತು ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅದರಲ್ಲಿ ಮಾಜಿ ಸಿಎಂ ಶೆಟ್ಟರ್ ಅವರು ಸ್ಥಾನ ಪಡೆದಿಲ್ಲ.
ರಾಷ್ಟ್ರಪತಿ ಕಾರ್ಯಕ್ರಮದ ವೇದಿಕೆಯಲ್ಲಿ ಜಗದೀಶ್ ಶೆಟರ್ಗೆ ಇಲ್ಲ ಸ್ಥಾನ: ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಅಶ್ವತ್ಥನಾರಾಯಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಬೈರತಿ ಬಸವರಾಜ, ಹಾಲಪ್ಪ ಆಚಾರ, ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಅವರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಇದು ಜಗದೀಶ್ ಶೆಟ್ಟರ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ತಮ್ಮ ನಾಯಕನನ್ನು ಕೈಬಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.