ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು. ಅಂಕಿ ಅಂಶಗಳ ಪ್ರಕಾರ, 22 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಇದೆ. ಶಿಕ್ಷಕರು ಉತ್ತಮ ರೀತಿಯಲ್ಲಿ ಬೋಧನೆ ಮಾಡುವುದರ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡಿ. ಈ ಮೂಲಕ ಶಾಲೆಗಳ ಉಳಿವಿಗೆ ಬದ್ಧರಾಗಬೇಕು ಎಂದು ಮಾಜಿ ಶಿಕ್ಷಣ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್‍ರವರ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಿಸಲಾಯ್ತು.
ಬಸವರಾಜ ಹೊರಟ್ಟಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಅನುಪಾತ ಕಡಿಮೆಯಾಗುವುದರ ಮೊದಲ ಪರಿಣಾಮವನ್ನು ಶಿಕ್ಷಕರು ಎದುರಿಸಬೇಕಾಗುತ್ತದೆ. 2026 ರ ವೇಳೆಗೆ ಬಹುತೇಕ ಕನ್ನಡ ಶಾಲೆ ಮುಚ್ಚಿ ಹೋಗುವ ಭೀತಿಯಿದೆ. ಅದಕ್ಕಾಗಿ ಶಿಕ್ಷಕರು ಕಾಳಜಿ ವಹಿಸಿ ಬೋಧನೆ ಮಾಡಬೇಕು. ಸ್ವಪ್ರೇರಣೆಯಿಂದ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲು ಮಾಡಬೇಕು ಎಂದರು.
ಲ್ಯಾಪ್‌ಟಾಪ್ ವಿತರಣೆ :
ಉತ್ತಮ ಅಂಕಗಳನ್ನು ಪಡೆದ ಕುರಡಿಕೇರಿ ಸರ್ಕಾರಿ ಫ್ರೌಡಶಾಲೆ ಚೈತ್ರಾ ರಂಗಪ್ಪ ಹುಲಮನಿ, ಅಶ್ವಿನಿ ಮಾರುತಿ ಉಣಕಲ್ ಹಾಗೂ ಜ್ಯೋತಿ ಮಹದೇವಪ್ಪ ತೊಲಗಬಾಗಿ ಇವರಿಗೆ ಇಲಾಖೆ ವತಿಯಿಂದ ಲ್ಯಾಪ್‌ಟಾಪ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ಶಾಲೆಯ ಮುಖ್ಯೋಪಧ್ಯಾಯರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.