ಹುಬ್ಬಳ್ಳಿ:ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಮೇಲೆ ಬೇಸರ ಇರುವುದು ನಿಜ. ಆದರೆ ಕಂಟ್ರೋಲ್ ಇಲ್ಲ ಎಂಬುದು ಸುಳ್ಳು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ಮೇಲೆ ಹೈಕಮಾಂಡ್ಗೆ ಬೇಸರ ಇರುವುದು ಸತ್ಯ. ಯಾವುದಕ್ಕಾಗಿ ಬೇಸರವಿದೆ ಎನ್ನುವುದನ್ನು ತಿಳಿಸಬೇಕು. ನಾವೆಲ್ಲಾ ಒಂದೇ ವಿಷಯ, ಸಿದ್ದಾಂತಕ್ಕೆ ಒಗ್ಗೂಡಿದ್ದೇವೆ. ಹೀಗಾಗಿ ಸಭೆ ನಡೆಸಿ ಚರ್ಚೆ ಮಾಡಬೇಕಿದೆ ಎಂದು ತಿಳಿಸಿದರು.
ಸಂಸತ್ ಅಧಿವೇಶನದಲ್ಲಿ ಅಪರಿಚಿತರು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಂದಿನಿಂದಲೂ ವಿದೇಶಿ ಶಕ್ತಿಗಳು ಭಯೋತ್ಪಾದಕರು, ರಾಷ್ಟ್ರದ್ರೋಹಿಗಳು ಹಿಂದೂಸ್ಥಾನ ಮೇಲೆ ಕಣ್ಣೀಟ್ಟಿದ್ದಾರೆ. ಅದನ್ನು ಎದುರಿಸಿಕೊಂಡು ಕೇಂದ್ರ ಸರ್ಕಾರ ಬಂದಿದೆ. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಯಶಸ್ವಿಯಾಗಿದ್ದಾರೆ. ಇಂದು ಎಲ್ಲ ದೇಶಗಳು ಭಾರತದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಬರುತ್ತಿವೆ ಎಂದು ವಿವರಿಸಿದರು.
ಇದೀಗ ಭಯೋತ್ಪಾದಕ ಚಟುವಟಿಕೆಗಳು ರಾಷ್ಟ್ರದ ಅನೇಕ ಭಾಗದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿವೆ. ಮೊನ್ನೆ ಬೆಂಗಳೂರಿನ 68 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಅದರಂತೆ ಕಲಿಸ್ತಾನಿಗಳು ಎಂದು ಹೇಳಿಕೊಂಡು ಒಳಗಡೆ ನುಗ್ಗಲಾಗಿತು. ಅದರಂತೆ ಇಂದು ನಡೆದ ಘಟನೆಯನ್ನು ಸರ್ಕಾರ ಕೂಲಂಕಷವಾಗಿ ಚರ್ಚೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.
ಬಿಜೆಪಿ ನಾಯಕರ ನಡುವೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸಂಘಟನೆಯಲ್ಲಿ ಶಕ್ತಿಶಾಲಿಯಾಗಿದೆ. 3-4 ಜನರಲ್ಲಿ ಅಸಮಾಧಾನ ಇರುವುದು ನಿಜ. ಬಿಜೆಪಿ ರಾಜ್ಯದಲ್ಲಿ 1 ಕೋಟಿ ಸದಸ್ಯತ್ವ ಹೊಂದಿದೆ. ಇದೀಗ ಅಸಮಾಧಾನ ವ್ಯಕ್ತಪಡಿಸಿದವರು ಪಕ್ಷ ನಿಷ್ಠರೇ, ಆದರೆ ಅವರು ವೈಯುಕ್ತಿಕ ವಿಚಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಹೊರತು ಪಕ್ಷದಿಂದಲ್ಲ. ಹೀಗಾಗಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಮುಂದಿನ ದಿನಗಳಲ್ಲಿ ಹೈಕಮಾಂಡ್ ಅವರೊಂದಿಗೆ ಚರ್ಚೆ ನಡೆಸಿ ಮಾತುಕತೆ ನಡೆಸಲಿದೆ ಎಂದು ತಿಳಿಸಿದರು.