ಹುಬ್ಬಳ್ಳಿ:ರಾಜ್ಯಾದ್ಯಂತ ಇಂದು ಅಂತಿಮ ಹಂತದ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ನಾಳೆ ಮನೆ ಮನೆಗೆ ಹೋಗಿ ಪ್ರಚಾರ ಮಾಡುವಂತಹದ್ದು ಪ್ರಾರಂಭವಾಗಲಿದೆ. ತಮ್ಮ ತಮ್ಮ ಕ್ಷೇತ್ರದ ಪ್ರತಿ ಮನೆಗೂ ಹೋಗಿ ಪ್ರಚಾರ ಮಾಡುವಂತೆ ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ 1.5 ಲಕ್ಷ ಕೋಟಿ ಭ್ರಷ್ಟಾಚಾರದ ಹಣ ರೈತರಿಗೆ ಹಂಚುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಬ್ಬಾ ಎಲ್ಲಿಂದ ತರ್ತಾರೆ, ಇದನ್ನು ನೀವು ಪತ್ರಕರ್ತರು ನಂಬ್ತೀರಲ್ಲ. ನಂಬಿ ನನ್ನ ಪ್ರಶ್ನೆ ಕೇಳ್ತಿರಲ್ಲ. ನನಗೆ ಆಶ್ಚರ್ಯ ಆಗಿದೆ. ನಾನು ಚುನಾವಣಾ ಆಯೋಗಕ್ಕೆ ಕೇಳಿದೆ. ಇದಕ್ಕೆ ಏನು ಫ್ರೂಪ್ ಇದ್ದರೆ ಕೊಡಿ ಅಂತ. ಆದರೆ ಕೊಡೋಕೆ ಆಗಿಲ್ಲ ಅವರಿಗೆ. ಇದುವರೆಗೆ ಒಂದೇ ಒಂದು ಕೇಸ್ ಇಲ್ಲ, ಸಾಕ್ಷಿ ಇಲ್ಲ ಅವರ ಹತ್ರ. ಇಷ್ಟೆಲ್ಲಾ ಮಾತಾಡೋ ಕಾಂಗ್ರೆಸ್ ಮೇಲೆ ಕೇಸ್ ಇಲ್ವಾ, ತಮ್ಮ ಮೇಲೇಯೇ ಕೇಸ್ ಇದ್ದು, ಅವರಿಂದ ಅವುಗಳಿಗೇನೆ ಕೋರ್ಟ್ನಲ್ಲಿ ಉತ್ತರ ಕೊಡೋಕೆ ಆಗ್ತಿಲ್ಲ ಎಂದರು.
ವೀರಶೈವ ಲಿಂಗಾಯತ ಮಹಾಸಭಾ ಕಾಂಗ್ರೆಸ್ ಬೆಂಬಲಿಸಿ ನಿರ್ಣಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ವೀರಶೈವ ಯಾವುದೇ ಸಂಸ್ಥೆಯಡಿ ಸೀಮಿತ ಆಗಿಲ್ಲ, ಅದಕ್ಕೆ ಬಹಳ ಗೌರವ ಕೊಡುತ್ತೇವೆ. ಚುನಾವಣಾ ಸಂದರ್ಭದಲ್ಲಿ ವೀರಶೈವ ಮಹಾಸಭಾ ಬಳಕೆ ಮಾಡೋದು ಸರಿ ಅಲ್ಲ. ಇದುವರೆಗೆ ಆಗಿಲ್ಲ, ಇದು ಆಗಬಾರದು. ಲಿಂಗಾಯತ ವೇದಿಕೆ ಅನ್ನೋದು ಎಲ್ಲಿಯೂ ಇಲ್ವೇ ಇಲ್ಲ. ನಾಲ್ಕು ಜನರು ಸೇರಿ ಏನೋ ಹೇಳಿದರೆ ಇಡೀ ಲಿಂಗಾಯತ ಸಮುದಾಯ ಧ್ವನಿ ಆಗುತ್ತಾ, ಅದು ಸಮುದ್ರ, ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂತವೆಲ್ಲ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ ಎಂದರು.