ಹುಬ್ಬಳ್ಳಿ:ನಮ್ಮ ದೇಶದ ಭವ್ಯ ಸಂಸ್ಕೃತಿ ಕುರಿತು ಇಂದಿನ ಮಕ್ಕಳಲ್ಲಿ ಅರಿವು ಮೂಡಿಸಲು ಹುಬ್ಬಳ್ಳಿ ಇಸ್ಕಾನ್ನಿಂದ ’ಸಾಂಸ್ಕೃತಿಕ ಹಬ್ಬ’ವನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 3 ರಿಂದ 8ರವರೆಗೆ ಒಂದು ವಾರ ರಾಯಾಪುರದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಈ ಉತ್ಸವನನ್ನು ಆಯೋಜನೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ಅವರು, ಜುಲೈ 4 ರಂದು ಬುಧವಾರ ಬೆಳಗ್ಗೆ 10.30ಕ್ಕೆ ಇಸ್ಕಾನ್ ಮಂದಿರದಲ್ಲಿ ’ಸಾಂಸ್ಕೃತಿಕ ಹಬ್ಬ’ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಮಕ್ಕಳಿಗಾಗಿ ಆಯೋಜಿಸಲಾದ ಅತಿದೊಡ್ಡ ಸಾಂಸ್ಕೃತಿಕ ಹಬ್ಬ ಇದಾಗಿದ್ದು, ನಾಟಕ, ನೃತ್ಯ, ರಂಗೋಲಿ ಸೇರಿದಂತೆ ಸುಮಾರು 30 ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಉತ್ಸವದಲ್ಲಿ ಪಾಲ್ಗೊಳ್ಳಲು 12 ಸಾವಿರಕ್ಕೂ ಅಧಿಕ ಮಕ್ಕಳು ನೋಂದಾಯಿತರಾಗಿದ್ದಾರೆ. ಈ ಸಾಂಸ್ಕೃತಿಕ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ಮಕ್ಕಳು ಮುಕ್ತವಾಗಿ ಭಾಗವಹಿಸಲು ಅಪೂರ್ವ ಅವಕಾಶ ಒದಗಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ವಿಶೇಷ ಬಹುಮಾನ ಹಾಗೂ ಅತಿ ಹೆಚ್ಚು ಅಂಕಗಳಿಸಿ ಅಗ್ರಸ್ಥಾನ ಪಡೆದ ಶಾಲೆಗೆ ಸಾಂಸ್ಕೃತಿಕ ಉತ್ಸವದ ಟ್ರೋಫಿಯನ್ನು ಸಮಾರೋಪ ಸಮಾರಂಭದಂದು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು, ಇಂದು ನಡೆದ ವಿಶೇಷ ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ, ಸ್ವರ್ಣ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ.ಚಿ ಗುರುಪಾಟಿ, ವಿ.ಎಸ್.ವಿ ಪ್ರಸಾದ್, ಯುರೋ ಕಿಡ್ಸ್‌ನ ನರೇಂದ್ರ ಬರವಾಲ, ರಾಮಗೋಪಾಲ್ ದಾಸ ಮತ್ತಿತರರು ಭಾಗಿಯಾಗಿದ್ದರು.