ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ವಿಶ್ವವಿದ್ಯಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳಿಗೆ ಬೇಕಾದ ಪೂರಕ ವಾತಾವರಣದ ಜತೆಗೆ ಕುಲಪತಿಗಳ ಕಾರ್ಯವೈಖರಿ ಮೇಲೆ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಬೆಳವಣಿಗೆ ನಿರ್ಧಾರವಾಗುತ್ತದೆ. ಆದ್ರೆ ಕುಲಪತಿಗಳ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂಬ ಕೂಗು ಮೊದಲಿನಿಂದಲೂ ಇದೆ.
ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಪ್ರಕ್ರಿಯೆ ಹೇಗಿದೆ? ವಿಶ್ವವಿದ್ಯಾಲಯದ ಮುಖ್ಯಸ್ಥರೆಂದೇ ಗುರುತಿಸಿಕೊಳ್ಳುವ ಕುಲಪತಿ ಅವರ ಸ್ಥಾನ ಗೌರವಾನ್ವಿತ ಹುದ್ದೆಯಾಗಿದ್ದು, ಅವರ ಪಾತ್ರ ಮಹತ್ವದ್ದು. ಇವರನ್ನು ಆಯ್ಕೆ ಮಾಡಲೆಂದೇ ಶೋಧನಾ ಸಮಿತಿ ರಚನೆಯಾಗಿದೆ. ಆದ್ರೆ ಕುಲಪತಿಗಳ ಆಯ್ಕೆಗೆ ಅರ್ಹತೆ ಅಂಶವನ್ನೇ ಮರೆತು ಹಣ ಬಲ, ರಾಜಕೀಯ, ಜಾತಿ ಹೆಸರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ಶೋಧನಾ ಸಮಿತಿ ಸದಸ್ಯರು ಇಬ್ಬರಿಂದ ಮೂವರು ಅರ್ಹರನ್ನು ಆಯ್ಕೆ ಮಾಡಿ ವಿಶ್ವವಿದ್ಯಾಲಯದ ಕುಲಾಧಿಪತಿಯಾದ ರಾಜ್ಯಪಾಲರಿಗೆ ವರದಿ ಸಲ್ಲಿಸುತ್ತಾರೆ. ಅಂತಿಮವಾಗಿ ರಾಜ್ಯಪಾಲರು ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಈ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ಆಗ ಮಾತ್ರ ವಿಶ್ವವಿದ್ಯಾಲಯಗಳು ಅಭಿವೃದ್ಧಿ ಹೊಂದಲು ಸಾಧ್ಯ.
ದೇಶದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವೂ ಒಂದು. ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಹೆಚ್ಚಿನ ವಿಶ್ವವಿದ್ಯಾನಿಲಯಗಳಲ್ಲಿ ಮೆರಿಟ್ ಆಧಾರಿತವಾಗಿ ಕುಲಪತಿಗಳ ನೇಮಕ ನಡೆಯುತ್ತಿಲ್ಲ ಎಂಬ ಆಪಾದನೆಯಿದೆ.
ಶೋಧನಾ ಸಮಿತಿ ಎಂಬುದು ಕೇವಲ ನಾಮಕಾವಾಸ್ತೆ ಆಗಿರುವುದರ ಪರಿಣಾಮ ಪ್ರಭಾವವುಳ್ಳವರು ಕುಲಪತಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ಇದರಿಂದಾಗಿ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ವಿಶ್ವವಿದ್ಯಾಲಯಗಳು ಎಡವುತ್ತಿವೆ ಎನ್ನುವುದು ಹೆಚ್ಚಿನವರ ವಾದ. ಹಾಗಾಗಿ ಸರ್ಕಾರ ಈ ಕೂಡಲೇ ಎಚ್ಚೆತ್ತು ಪ್ರಾಮಾಣಿಕತೆಯಿಂದ, ಅರ್ಹ ವ್ಯಕ್ತಿಗಳು ಕುಲಪತಿಗಳಾಗಿ ಆಯ್ಕೆ ಆಗುವುದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಡಬೇಕಾಗಿದೆ.