ಹುಬ್ಬಳ್ಳಿ/ಬೆಂಗಳೂರು:ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದೆ. ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರನ್ನಾಗಿ ಮಹಿಳಾ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರೇಟ್ನ ಮೊಟ್ಟ ಮೊದಲ ಮಹಿಳಾ ಕಮಿಷನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಭಾರಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ ಬಾಬು ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ರೇಣುಕಾ ಸುಕುಮಾರ ಅವರು 2011ರ ಐಪಿಎಸ್ ಬ್ಯಾಚ್ನ ಅಧಿಕಾರಿಯಾಗಿದ್ದು, ಸದ್ಯ ಗೃಹ ರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಿಂದೆಯೂ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಆಗಿ ಸಹ ಕಾರ್ಯನಿರ್ವಹಿಸಿದ್ದರು.
ಹು-ಧಾ ಇತಿಹಾಸದಲ್ಲಿಯೇ ಪ್ರಥಮ ಮಹಿಳಾ ಪೊಲೀಸ್ ಆಯುಕ್ತೆಯಾಗಿ ಆಯ್ಕೆಯಾಗಿದ್ದಾರೆ. ಡಿಸಿಪಿ ಇದ್ದಾಗಲೂ ಕೂಡ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕಮಿಷನರ್ ಆಗಿ ಆಗಮಿಸಿದ್ದರಿಂದ ವಾಣಿಜ್ಯ ನಗರಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಬೇಕಿದೆ.
ಕಮಲ್ ಪಂತ್ ವರ್ಗಾವಣೆ:ಮತ್ತೋರ್ವ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರನ್ನು ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಯ ಡಿಜಿಪಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೂವರು ಡಿವೈಎಸ್ಪಿ, 40 ಮಂದಿ ಇನ್ಸ್ಪೆಕ್ಟರ್ ವರ್ಗಾವಣೆ:ಬೆಂಗಳೂರು ಸೇರಿ ರಾಜ್ಯದ ವಿವಿಧ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂರು ಮಂದಿ ಡಿವೈಎಸ್ಪಿ ಮತ್ತು 40 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ. ಡಿವೈಎಸ್ಪಿಗಳಾದ ಮಂಜುನಾಥ ಚೌಧರಿ ಸಿಸಿಬಿಗೆ, ಟಿ.ರಂಗಪ್ಪ ಸಂಪಿಗೆಹಳ್ಳಿ ಉಪವಿಭಾಗಕ್ಕೆ ಹಾಗೂ ಪಿ.ರವಿ ಅವರು ದೊಡ್ಡಬಳ್ಳಾಾಪುರ ಉಪವಿಭಾಗಕ್ಕೆ ವರ್ಗಾವಣೆ ಆಗಿದ್ದಾರೆ.
10 ಮಂದಿ IAS ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರ ನಿನ್ನೆಯಷ್ಟೇ ಹತ್ತು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಂತಿದೆ.
- ಮಹಮ್ಮದ್ ಮೊಹ್ಸಿನ್- ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ.
- ಟಿ.ಎಚ್.ಎಂ.ಕುಮಾರ್ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ.
- ಆರ್.ಸ್ನೇಹಲ್ - ನಿರ್ದೇಶಕಿ(ಐಟಿ), ಬಿಎಂಟಿಸಿ.
- ಪ್ರಭುಲಿಂಗ ಕವಲಿಕಟ್ಟಿ- ಆಯುಕ್ತರು, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವೆ.
- ಜಿ.ಲಕ್ಷ್ಮೀಕಾಂತ್ ರೆಡ್ಡಿ- ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ.
- ಪಂಡ್ವೆ ರಾಹುಲ್ ತುಕರಾಮ್ - ಕಾರ್ಯ ನಿರ್ವಾಹಣಾಧಿಕಾರಿ, ರಾಯಚೂರು ಜಿಲ್ಲೆ.
- ಎಸ್.ಜೆ.ಸೋಮಶೇಖರ್- ಕಾರ್ಯ ನಿರ್ವಾಹಣಾಧಿಕಾರಿ, ಚಿತ್ರದುರ್ಗ ಜಿಲ್ಲೆ.
- ಎಸ್.ರಂಗಪ್ಪ- ನಿರ್ದೇಶಕರು, ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗ.
- ಡಾ.ಎಸ್. ಆಕಾಶ್ - ಹೆಚ್ಚುವರಿ ಆಯುಕ್ತರು, ಕಲಬುರಗಿ ಜಿಲ್ಲೆಯ ಸಾರ್ವಜನಿಕ ಸೂಚನೆಗಳು ವಿಭಾಗ.
- ಅನ್ಮೂಲ್ ಜೈನ್- ನೋಂದಣಿ (ವಿಜೆಲೆನ್ಸಿ) ಡಿಐಜಿ.
- ಇದನ್ನೂ ಓದಿ:Transfer Order: 10 ಮಂದಿ IAS ಅಧಿಕಾರಿಗಳ ವರ್ಗಾವಣೆ