ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಜನರು ಕೆಲಸ ಇಲ್ಲದೇ ಗುಳೆ ಹೋಗುತ್ತಿದ್ದಾರೆ. ಹೀಗಿರುವಾಗ ಜನರಿಗೆ ಆಧಾರವಾಗಿದ್ದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯಲೂ ಕೂಡ ಜನ ಪರದಾಡುವಂತಾಗಿದೆ.
ಹೌದು, ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಜನರು ಸರ್ಕಾರ ನೀಡುವ ಅಕ್ಕಿಯನ್ನು ಪಡೆಯಲು ತಮ್ಮ ನಿತ್ಯದ ಕೆಲಸಗಳನ್ನು ಬಿಟ್ಟು ದಿನ ಪೂರ್ತಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮೊದಲೇ ಬರಗಾಲದಿಂದ ಕಂಗೆಟ್ಟ ಜನರು ಸರಿಯಾಗಿ ಕೆಲಸ ಕಾರ್ಯಗಳು ಸಿಗದೇ, ಕೆಲಸಗಳಿಗೆ ಪರಿತಪಿಸುತ್ತಿದ್ದಾರೆ. ಇಂತಹ ಜನರಿಗೆ ಜೀವನಕ್ಕೆ ಆಧಾರವಾಗಿದ್ದ ಅನ್ನಭಾಗ್ಯದ ಅಕ್ಕಿಯೂ ಸಹಿತ ಸರಿಯಾದ ಸಮಯಕ್ಕೆ ದೊರೆಯದೇ ಜನರು ಹೊಟ್ಟೆಗೆ ಹಿಟ್ಟಿಲ್ಲದೇ ಬದುಕುವಂತಾಗಿದೆ.
ಅನ್ನಭಾಗ್ಯ ಅಕ್ಕಿ ಪಡೆಯಲು ಜನರ ಪರದಾಟ ಅನ್ನಭಾಗ್ಯ ಅಕ್ಕಿ ಪಡೆಯಬೇಕೆಂದರೆ ಕಂಪ್ಯೂಟರ್ಗಳ ಮೂಲಕ ರಸೀದಿ ಪಡೆದು ಅಕ್ಕಿಯನ್ನು ಪಡೆಯಬೇಕೆಂಬ ನಿಯಮವಿದೆ. ಅದಕ್ಕಾಗಿ ಜನರು ಸೊಸೈಟಿಗಳ ಮುಂದೆ ಬೆಳಗ್ಗೆಯೇ ಬಂದು ಕ್ಯೂ ನಿಂತರೂ ಕೂಡ ಈ ಕಂಪ್ಯೂಟರ್ ಗಳಿಂದ ರಸೀದಿ ಪಡೆಯುವದು ಮಾತ್ರ ಹಲವಾರು ಸಮಯ ಕಾದ ನಂತರವೇ. ಅಕ್ಕಿ ಪಡೆಯಲು ಕಂಪ್ಯೂಟರ್ನಲ್ಲಿ ರೇಷನ್ ಕಾರ್ಡ್ ಎಂಟ್ರಿ ಮಾಡಿ ರಸೀದಿ ನೀಡಲಾಗುತ್ತದೆ. ಆದರೆ, ಇದಕ್ಕೆ ಇಂಟರ್ನೆಟ್ ಸಮಸ್ಯೆ ಇರುವುದರಿಂದ ಜನರು ದಿನಪೂರ್ತಿ ನಿಂತು ಅಕ್ಕಿ ಪಡೆಯುವಂತಾಗಿದೆ.
ಇಂಟರ್ನೆಟ್ ಸಮಸ್ಯೆ:
ಒಂದೊಂದು ಬಾರಿ ಇಂಟರ್ನೆಟ್ ಸಮಸ್ಯೆಯಿಂದ ದಿನಪೂರ್ತಿ ಕಾದರೂ ಕೂಡ ಅಕ್ಕಿ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ. ಇದರಿಂದಾಗಿ ಮತ್ತೆ ಬೆಳಗ್ಗೆ ಬಂದು ನಿಲ್ಲಬೇಕಾಗುತ್ತದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇಂತಹ ಸಮಸ್ಯೆಗಳತ್ತ ಗಮನ ಹರಿಸಿ ಬಡ ಜನತೆಗೆ ಅನುಕೂಲತೆ ಕಲ್ಪಿಸಬೇಕಿದೆ.