ಹುಬ್ಬಳ್ಳಿ :ಸರ್ಕಾರಕ್ಕೆ ಅನ್ನದಾತನ ಮೇಲೆ ಇಲ್ಲದ ಪ್ರೀತಿ ವಿಮಾ ಕಂಪನಿಗಳ ಮೇಲಿದೆ. ಕಳೆದ ವರ್ಷದ ಬೆಳೆವಿಮೆ ನೀಡಬೇಕಿದ್ದ ವಿಮಾ ಕಂಪನಿಗಳು ಈವರೆಗೆ ಒಂದು ಪೈಸೆ ಹಣ ಕೊಟ್ಟಿಲ್ಲ. ಈಗ ಕೊರೊನಾ ನೆಪ ಮಾಡಿಕೊಂಡು ಇನ್ನಷ್ಟು ನಿರ್ಲಕ್ಷ್ಯ ತೋರುತ್ತಿವೆ. ಇತ್ತ ಹಣ ಕೊಡಿಸಬೇಕಿದ್ದ ಸರ್ಕಾರ ರೈತರ ನೆರವಿಗೆ ಬಾರದಿರೋದು ಅನ್ನದಾತನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.
ಕಳೆದ ವರ್ಷ ವರುಣನ ಆರ್ಭಟ ಈ ವರ್ಷ ಕೊರೊನಾ ಹಾವಳಿ. ಇವುಗಳಿಂದ ರಾಜ್ಯದ ರೈತರು ಕಂಗೆಟ್ಟಿ ಹೋಗಿದ್ದಾರೆ. 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆವಿಮೆ ಹಣ ಈವರೆಗೂ ಪಾವತಿಯಾಗದಿರುವುದು ಸಂಕಷ್ಟದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಧಾರವಾಡ ಜಿಲ್ಲೆಯೊಂದರಲ್ಲೇ ಕಳೆದ ವರ್ಷ ಮುಂಗಾರಿನಲ್ಲಿ ಬೆಳೆದ ಹತ್ತಿ, ಶೇಂಗಾ, ಮೆಣಸಿನಕಾಯಿ, ಹೆಸರು, ಸೋಯಾಬಿನ್, ಈರುಳ್ಳಿ ಬೆಳೆಗೆ 92361 ರೈತರು 1825.79 ಲಕ್ಷ ರೂಪಾಯಿ ಬೆಳೆವಿಮೆ ಪ್ರೀಮಿಯಂ ಹಣ ತುಂಬಿದ್ದಾರೆ. ಇಷ್ಟೊತ್ತಿಗಾಗಲೇ ಮುಂಗಾರಿಗೆ ತುಂಬಿದ್ದ ಬೆಳೆವಿಮೆ ಹಣ ರೈತರಿಗೆ ಪಾವತಿಯಾಗಬೇಕಿತ್ತು. ಹಣ ಪಾವತಿಯಾಗದಿರೋದಕ್ಕೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.