ಕಡಿಮೆ ಬೆಲೆಯಲ್ಲಿ ಪದಾರ್ಥಗಳ ವಿತರಣೆ ಹುಬ್ಬಳ್ಳಿ : ದೀಪಾವಳಿಯ ಉಡುಗೊರೆಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ "ಭಾರತ್ ಬ್ರಾಂಡ್" ಬೇಳೆ, ಈರುಳ್ಳಿಯಂತಹ ಪದಾರ್ಥಗಳನ್ನು ಮನೆ ಮನೆಗೆ ತಲುಪಿಸುವ ಹೊಸ ಯೋಜನೆ ಹಾಕಿಕೊಂಡಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ಕಡಿಮೆ ಬೆಲೆಯಲ್ಲಿ ಈರುಳ್ಳಿ ತಲುಪಿಸುವ ಉದ್ದೇಶದಿಂದ ಒಟ್ಟು ಮೂರು ಸಂಚಾರಿ ವಾಹನಗಳಲ್ಲಿ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ₹80 ಇದ್ದರೆ, ಭಾರತ್ ಬ್ರಾಂಡ್ ಸಂಚಾರಿ ವಾಹನದಲ್ಲಿ ₹25ಗೆ ಸಿಗುತ್ತಿದೆ ಮತ್ತು ಕಡಲೆ ಬೇಳೆಗೆ ಮಾರುಕಟ್ಟೆ ಬೆಲೆ ₹120 ಇದ್ದರೆ ಈ ಸಂಚಾರಿ ವಾಹನದಲ್ಲಿ ₹60ಕ್ಕೆ ಮಾರಾಟ ಮಾಡಲಾಗುತ್ತಿದೆ.
ಹಬ್ಬದ ಶುಭ ಸಂದರ್ಭದಲ್ಲಿ ಜನರಿಗೆ ಅತೀ ಕಡಿಮೆ ದರದಲ್ಲಿ ನಿತ್ಯದ ಬಳಕೆಯ ಸಾಮಗ್ರಿಗಳನ್ನು ಒದಗಿಸುವ ವಿನೂತನ ಯೋಜನೆ ಜನರ ಬಳಿಗೆ ತಲುಪಿದ್ದು, ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳುವಂತಾಗಲಿ ಮತ್ತು ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಧನ್ಯವಾದಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ದೀಪಾವಳಿ: ಕೈದಿಗಳಿಂದ ರುಚಿರುಚಿಯಾದ ಸಿಹಿತಿಂಡಿ ತಯಾರಿ, ಮಾರಾಟ- ವಿಡಿಯೋ
ಕೈದಿಗಳಿಂದ ರುಚಿರುಚಿಯಾದ ಸಿಹಿತಿಂಡಿ ತಯಾರಿ: ಮತ್ತೊಂದೆಡೆ ದೀಪಾವಳಿ ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಮಧುರೈ ಕೇಂದ್ರ ಕಾರಾಗೃಹದ ಕೈದಿಗಳು ನಗರದ ಜನತೆಗಾಗಿ ಸಿಹಿತಿಂಡಿ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಿಹಿ ತಿನಿಸು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ತಯಾರಿಸಲು ಇವರು ಜೈಲು ಅಧಿಕಾರಿಗಳಿಂದ ಸಹಾಯ ಪಡೆಯುತ್ತಿದ್ದಾರೆ. ಈ ಉತ್ಪನ್ನಗಳನ್ನು ಜೈಲು ಬಜಾರ್‌ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳ ಜನರು ಇಲ್ಲಿಗೆ ಬಂದು ಖರೀದಿಸಬಹುದು. ಕೈದಿಗಳಿಗೆ ಉದ್ಯೋಗ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮಧುರೈ ಕೇಂದ್ರ ಕಾರಾಗೃಹದ ಅಧಿಕಾರಿಗಳು ಕೈಗೊಂಡಿರುವ ಉತ್ತಮ ಉಪಕ್ರಮ ಇದಾಗಿದೆ.
ಈ ಉತ್ಪನ್ನಗಳ ಮಾರಾಟದಿಂದ ಗಳಿಸಿದ ಹಣವನ್ನು ಜೈಲು ಕೈದಿಗಳಿಗೇ ಬಳಕೆ ಮಾಡಲಾಗುತ್ತದೆ. ಸೋಮವಾರ, ಕಾರಾಗೃಹ ಇಲಾಖೆ ಡಿಐಜಿ ಪಳನಿ ಅವರು ಮಧುರೈ ಸೆಂಟ್ರಲ್ ಜೈಲ್ ಬಜಾರ್‌ನಲ್ಲಿ ಕೈದಿಗಳು ತಯಾರಿಸಿದ ಈ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು.
''ಜೈಲು ಅಧಿಕಾರಿಗಳು, ತಮಿಳುನಾಡು ಕಾರಾಗೃಹ ಇಲಾಖೆಯ ಡಿಜಿಪಿ ಅಮರೇಶ್ ಪೂಜಾರಿ ಸಲಹೆಯ ಮೇರೆಗೆ ಕೈದಿಗಳ ಶಿಕ್ಷಣ ಮತ್ತು ವೃತ್ತಿಜೀವನವನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ'' ಎಂದು ಡಿಐಜಿ ಪಿಲಾನಿ ತಿಳಿಸಿದ್ದಾರೆ.