ಕರ್ನಾಟಕ

karnataka

ETV Bharat / state

ಎಟಿಎಂನಿಂದ ಹಣ ಬಾರದೇ 500 ಅಕೌಂಟ್​​ನಿಂದ ಕಟ್​.. ವಕೀಲನಿಗೆ ಬಡ್ಡಿ ಸಮೇತ 1,02,700 ರೂ. ಪರಿಹಾರ ನೀಡಲು ಆದೇಶ - ಇಂಡಿಯನ್ ಓವರಸೀಸ್ ಬ್ಯಾಂಕ್

ಇಂಡಿಯನ್ ಓವರಸೀಸ್ ಬ್ಯಾಂಕ್ ಸಪ್ತಾಪುರ ಶಾಖೆ ಎಟಿಎಂ ನಿರಾಕರಿಸಿದ 500 ರೂ.ಗಳನ್ನು ನೀಡದ ಬ್ಯಾಂಕಿಗೆ ದಂಡ ವಿಧಿಸಲಾಗಿದೆ. ಖರ್ಚು, ಬಡ್ಡಿ ಸೇರಿ ಗ್ರಾಹಕನಿಗೆ ರೂ.1,02,700 ಗಳ ಪರಿಹಾರ ನೀಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಆದೇಶ ನೀಡಿದೆ.

Indian Overseas Bank was fined  Dharwad District Consumer Commission  Indian Overseas Bank fined over debit issue  ಎಟಿಎಂನಿಂದ ಹಣ ಬಾರದೇ ಡೆಬಿಟ್  ಪರಿಹಾರ ನೀಡಲು ಬ್ಯಾಂಕ್​ಗೆ ಆದೇಶ  ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ  ಇಂಡಿಯನ್ ಓವರಸೀಸ್ ಬ್ಯಾಂಕ್  ಬ್ಯಾಂಕ್​ನ ಎಟಿಎಂನಿಂದ ಹಣ ಬಾರದೇ ಡೆಬಿಟ್
ಎಟಿಎಂನಿಂದ ಹಣ ಬಾರದೇ ಡೆಬಿಟ್​ ಆಗಿದ್ದ ರೂ. 500

By

Published : Oct 15, 2022, 8:21 AM IST

ಧಾರವಾಡ:ಬ್ಯಾಂಕ್​ನ ಎಟಿಎಂನಿಂದ ಹಣ ಬಾರದೇ ಡೆಬಿಟ್​ ಆಗಿದ್ದ 500 ರೂಪಾಯಿ ಹಿಂದುರಿಗಿಸದ ಬ್ಯಾಂಕ್​ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಗ್ರಾಹಕನಿಗೆ 1,02,700 ರೂ.ಗಳ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದೆ.

ಏನಿದು ಪ್ರಕರಣ: ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖೆಯ ಗ್ರಾಹಕರಾದ ವಕೀಲ ಸಿದ್ದೇಶ ಹೆಬ್ಬಳ್ಳಿ ಅವರು ನವೆಂಬರ್ 28, 2020 ರಂದು ತಮ್ಮ ಎಟಿಎಂ ಕಾರ್ಡನಿಂದ ರೂ.500 ಹಣ ತಗೆಯಲು ಪ್ರಯತ್ನಿಸಿದಾಗ ತನ್ನ ಉಳಿತಾಯ ಖಾತೆಗೆ ಡೆಬಿಟ್ ಆದರೂ ತನಗೆ ಆ ಹಣ ಬಾರದ ಕಾರಣ ಮತ್ತೊಮ್ಮೆ ಪಕ್ಕದ ಎಟಿಎಂ ಮಶೀನಿನಿಂದ ಕಾರ್ಡಹಾಕಿ ರೂ.500 ಪಡೆದಿದ್ದರು. ಇಂಡಿಯನ್ ಓವರಸೀಸ್ ಬ್ಯಾಂಕಿನ ಎಟಿಎಂ ಕಾರ್ಡ್‍ನಿಂದ ಮೊದಲನೇ ಸಲ ತೆಗೆದ ರೂ.500 ತನಗೆ ಬಂದಿಲ್ಲವಾದರೂ ತನ್ನ ಖಾತೆಯಿಂದ ರೂ.500 ಡೆಬಿಟ್ ಆಗಿರುವ ಕುರಿತು ಡಿಸೆಂಬರ್ 02, 2020 ರಂದು ತಮ್ಮ ಖಾತೆಯಿರುವ ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖಾ ವ್ಯವಸ್ತಾಪಕರಿಗೆ ದೂರು ಕೊಟ್ಟಿದ್ದರು.

ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖೆಯ ಗ್ರಾಹಕರಾದ ವಕೀಲ ಸಿದ್ದೇಶ ಹೆಬ್ಬಳ್ಳಿ

ಆದರೆ, ಸಿದ್ದೇಶ ಹೆಬ್ಬಳ್ಳಿ ಅವರು ನೀಡಿದ ದೂರು ಕುರಿತು ಶಾಖಾ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೋಳ್ಳದೇ ಇದ್ದರಿಂದ, ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಬ್ಯಾಂಕಿನವರ ಮೇಲೆ ಕ್ರಮ ಕೈಗೊಳ್ಳುವಂತೆ ಧಾರವಾಡದ ಜಿಲ್ಲಾ ಗ್ರಾಹಕರ ಆಯೋಗಕ್ಕೆ ವಕೀಲರು ದೂರು ಸಲ್ಲಿಸಿದ್ದರು. ಆಯೋಗದ ಅಧ್ಯಕ್ಷ ಈಶಪ್ಪ ಕ.ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ ಮತ್ತು ಪಿಸಿ ಹಿರೇಮಠ ಅವರು ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದರು.

ಆಯೋಗ ನೀಡಿದ ತೀರ್ಪು ಏನು?:ಎಟಿಎಂ ಹಣ ನಿರಾಕರಣೆಯ ಪ್ರಸಂಗಗಳಲ್ಲಿ ಗ್ರಾಹಕರ ಖಾತೆ ಹೊಂದಿದ ಬ್ಯಾಂಕಿನವರು ಹಣ ನಿರಾಕರಣೆಯ ದಿನಾಂಕದಿಂದ 6 ದಿನದ ಒಳಗಾಗಿ ಹಣವನ್ನು ಅವರ ಖಾತೆಗೆ ಜಮಾ ಮಾಡಬೇಕು. ತಪ್ಪಿದಲ್ಲಿ 6 ದಿವಸದ ನಂತರ ದಿನ ಒಂದಕ್ಕೆ ರೂ.100 ರಂತೆ ವಿಳಂಬದ ಅವಧಿಗೆ ಗ್ರಾಹಕರಿಗೆ ಪರಿಹಾರ ಕೊಡಬೇಕು. ಇದು ರಿಜರ್ವ ಬ್ಯಾಂಕಿನ ನಿರ್ದೇಶನವಿದ್ದರೂ ಅದನ್ನು ಪಾಲಿಸದೇ ಧಾರವಾಡದ ಸಪ್ತಾಪುರದ ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖಾ ವ್ಯವಸ್ತಾಪಕರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆಂದು ತೀರ್ಪು ನೀಡಿದ್ದಾರೆ.

ಈ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ ಶಾಖಾ ವ್ಯವಸ್ಥಾಪಕ ಹಾಗೂ ಆಡಳಿತದ ಉಸ್ತುವಾರಿದಾರರು ಸಾರ್ವಜನಿಕರ ಟ್ರಸ್ಟಿಗಳಾಗಬೇಕು. ಆದ್ರೆ ಕರ್ತವ್ಯಲೋಪ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ. ಸಾರ್ವಜನಿಕರ ಸ್ವತ್ತಾದ ಬ್ಯಾಂಕಿನ ಹಣದಿಂದ ಲಕ್ಷಗಟ್ಟಲೆ ಹಣವನ್ನು ದೂರುದಾರರಿಗೆ ಪರಿಹಾರ ಹಾಗೂ ದಂಡದ ರೂಪದಲ್ಲಿ ಕೊಡಬೇಕಾದುದು ವಿಪರ್ಯಾಸ ಎಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿತು. ತಪ್ಪು ಮಾಡಿದ ಬ್ಯಾಂಕ್​ ಸಿಬ್ಬಂದಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆ ಬ್ಯಾಂಕಿನ ಮೇಲಾಧಿಕಾರಿಗಳಿಗೆ ಆಯೋಗ ನಿರ್ದೇಶಿಸಿದೆ.

ದೂರುದಾರರಿಗೆ ನಿರಾಕರಣೆಯ ರೂ.500 ಗಳು ಮತ್ತು ಅದಕ್ಕೆ ನವೆಂಬರ್ 28, 2020 ರಿಂದ ಶೇ.8 ರಂತೆ ಬಡ್ಡಿಯ ಜೊತೆ ರಿಜರ್ವ ಬ್ಯಾಂಕಿನ ಸುತ್ತೋಲೆಯಂತೆ ದಿನಕ್ಕೆ ರೂ.100 ರಂತೆ 677 ದಿವಸಗಳ ವಿಳಂಬಕ್ಕೆ ರೂ.67,700 ಪರಿಹಾರ ನೀಡಬೇಕು. ಅಷ್ಟೇ ಅಲ್ಲ ಸೇವಾ ನ್ಯೂನತೆ ಎಸಗಿದ್ದಕ್ಕಾಗಿ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 25 ಸಾವಿರ ಪರಿಹಾರ ಹಾಗೂ 10 ಸಾವಿರ ಪ್ರಕರಣದ ಖರ್ಚು ವೆಚ್ಚ ಸೇರಿ ರೂ 1,02,700 ನೀಡಬೇಕೆಂದು ಆಯೋಗ ತೀರ್ಪು ನೀಡಿದೆ. ಈ ತೀರ್ಪು ನೀಡಿದ 30 ದಿನದೊಳಗಾಗಿ ಸಂಬಂಧಿಸಿದ ಗ್ರಾಹಕರಿಗೆ ಹಣ ಪಾವತಿಸಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ತೀರ್ಪು ಪ್ರಕಟಿಸಿರುವ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಅವರು, ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‍ಗಳು ತಮ್ಮ ಗ್ರಾಹಕರಿಗೆ ರಿಜರ್ವ್ ಬ್ಯಾಂಕಿನ ನಿಯಮಗಳನ್ನು ಮತ್ತು ತಮ್ಮ ಬ್ಯಾಂಕಿನ ನಿಯಮಗಳನ್ನು ಸಹವಿವರವಾಗಿ ತಿಳಿಸಬೇಕು. ರಿಜರ್ವ್ ಬ್ಯಾಂಕ್ ಗ್ರಾಹಕರಿಗೆ ನೀಡಿರುವ ಸವಲತ್ತು ಮತ್ತು ಅನುಕೂಲತೆಗಳನ್ನು ಗ್ರಾಹಕರಿಗೆ ಪ್ರಚುರಪಡಿಸಲು ಸ್ಥಳೀಯ ಭಾಷೆಯಲ್ಲಿ ತಮ್ಮ ಬ್ಯಾಂಕ್ ವ್ಯಾಪ್ತಿಯಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ಆರ್ಥಿಕ ವ್ಯವಹಾರದ ಕುರಿತು ಎಲ್ಲ ಬ್ಯಾಂಕ್‍ಗಳು ತಮ್ಮ ಗ್ರಾಹಕರಿಗೆ ಆರ್ಥಿಕ ಸಾಕ್ಷರತೆ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓದಿ:ನಿಮ್ಮ ಕ್ರೆಡಿಟ್​ ಡೆಬಿಟ್​ ಕಾರ್ಡ್​​​​ ಸುರಕ್ಷತೆಗೆ ಬಂದಿದೆ ಟೋಕನೈಸೇಶನ್​.. ಏನಿದು ಆರ್​ಬಿಐನ ಹೊಸ ರೂಲ್ಸ್​​​!

ABOUT THE AUTHOR

...view details