ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಕ್ರಿಕೆಟ್ ಕಲರವ ಶುರುವಾಗಲಿದೆ. ಸುಮಾರು 3 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಇಲ್ಲಿನ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸೆಪ್ಟೆಂಬರ್ 8ರಿಂದ 11ರವರೆಗೆ ರಾಜನಗರ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವೆ ಚತುರ್ದಿನ (ಟೆಸ್ಟ್) ಪಂದ್ಯ ನಡೆಯಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಉಭಯ ತಂಡಗಳ ನಡುವಿನ 3 ಚತುರ್ದಿನ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಿಗದಿ ಮಾಡಿತ್ತು.
ಆದರೆ, ಇದರಲ್ಲಿ 2ನೇ ಚತುರ್ದಿನ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಮೊದಲ ಹಾಗೂ 3ನೇ ಪಂದ್ಯಗಳು ಬೆಂಗಳೂರಿನಲ್ಲಿಯೇ ಆಯೋಜನೆಯಾಗಿವೆ. ಹುಬ್ಬಳ್ಳಿಯಲ್ಲಿ ಈ ಹಿಂದೆ 2019ರ ಮೇ ತಿಂಗಳಲ್ಲಿ ಭಾರತ-ಶ್ರೀಲಂಕಾ ಎ ತಂಡಗಳ ನಡುವೆ ಒಂದು ಚತುರ್ದಿನ ಪಂದ್ಯ ಹಾಗೂ 2 ಏಕದಿನ ಪಂದ್ಯಗಳು ನಡೆದಿದ್ದವು. ಇದಕ್ಕೂ ಮೊದಲು 2017ರಲ್ಲಿ ಭಾರತ-ಬಾಂಗ್ಲಾದೇಶ ಎ ಮಹಿಳಾ ತಂಡಗಳ ನಡುವೆ ಕ್ರಿಕೆಟ್ ಪಂದ್ಯಕ್ಕೆ ಹುಬ್ಬಳ್ಳಿ ಆತಿಥ್ಯ ವಹಿಸಿತ್ತು.
ಇದನ್ನೂ ಓದಿ:ನನ್ನ ವೃತ್ತಿ ಜೀವನದ ಅತ್ಯಂತ ಖುಷಿಯ ದಿನ.. ಏಷ್ಯಾ ಕಪ್ಗೂ ಮುನ್ನ ಧೋನಿ ನೆನೆದ ಕೊಹ್ಲಿ
ಹುಬ್ಬಳ್ಳಿಯಲ್ಲಿ 2013ರಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಎ ತಂಡಗಳ ನಡುವೆ ಮೊದಲ ಬಾರಿಗೆ ಆಯೋಜನೆಯಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆಗ ಖ್ಯಾತ ಆಟಗಾರರಾದ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಜಹೀರ್ ಖಾನ್ ಆಡಿದ್ದರು. ಈಗ ಭಾರತ ಟೆಸ್ಟ್ ತಂಡದಲ್ಲಿರುವ ಚೇತೇಶ್ವರ ಪೂಜಾರ ಈ ಮೈದಾನದಲ್ಲಿ ಅಜೇಯ ತ್ರಿಶತಕ ಬಾರಿಸಿರುವುದು ಇಲ್ಲಿನ ಕ್ರಿಕೆಟ್ ಪ್ರೇಮಿಗಳ ಮನದಾಳದಲ್ಲಿದೆ.
ಈ ಬಾರಿ ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ರಾಹುಲ್ ಚಹರ್, ಕುಲದೀಪ್ ಯಾದವ್, ಉಮ್ರಾನ್ ಮಲ್ಲಿಕ್ ಅವರಂತಹ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಭಾರತ ಎ ತಂಡದಲ್ಲಿದ್ದಾರೆ. ಕಳೆದ 3 ವರ್ಷಗಳಿಂದ ಹುಬ್ಬಳ್ಳಿ ರಾಜನಗರ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿರಲಿ, ದೇಶಿ ಕ್ರಿಕೆಟ್ (ರಣಜಿ) ಪಂದ್ಯಗಳೂ ನಡೆದಿಲ್ಲ.
ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲೂ ಮಳೆಯ ಕಾರಣಕ್ಕೆ ಹುಬ್ಬಳ್ಳಿಗೆ ಪಂದ್ಯ ನಿಗದಿಯಾಗಿರಲಿಲ್ಲ. ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ವಿರಾಟ್ ವಿಶ್ವದರ್ಜೆ ಕ್ರಿಕೆಟಿಗ, ದೇಶಕ್ಕಾಗಿ ಪಂದ್ಯ ಗೆಲ್ಲುವ ಹಸಿವಿನ್ನೂ ಇದೆ: ಕೆ ಎಲ್ ರಾಹುಲ್