ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಮೇಲ್ವಿಚಾರಣೆಗಾಗಿ ನೇಮಿಸಿರುವ ಇನ್ಸಿಡೆಂಟ್ ಕಮಾಂಡರ್‌ಗಳು ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಹೇಳಿದರು.
ಪಾಲಿಕೆ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಕುರಿತು ವಲಯ ಅಧಿಕಾರಿಗಳು ಹಾಗೂ ಇನ್ಸಿಡೆಂಟ್ ಕಮಾಂಡರ್‌ಗಳ ಜೊತೆ ಸಭೆ ನಡೆಸಿ ಮಾತನಾಡಿದರು. ವಲಯ 5, 6, 8 ಹಾಗೂ 10ರಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳಿವೆ. ಸೀಲ್‌ಡೌನ್ ಪ್ರದೇಶಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವರಿಸುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಸ್ಥಳದಲ್ಲಿಯೇ ಮಾಸ್ಕ್ ವಿತರಿಸಬೇಕು. ಸೀಲ್‌ಡೌನ್ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೋಡಿಯಂ ಹೈಪೊಕ್ಲೋರೈಡ್ ದ್ರಾವಣವನ್ನು ಸಿಂಪಡಿಸಬೇಕು. ಪೊಲೀಸ್ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಸೀಲ್‌ಡೌನ್ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಂದ ತೊಂದರೆ ಉಂಟಾದರೆ ತಕ್ಷಣ ಮೇಲಧಿಕಾರಿಗಳಿಗೆ ತಿಳಿಸಬೇಕು. ಈ ಪ್ರದೇಶಗಳಲ್ಲಿ ಕಡ್ಡಾಯವಾಗಿ ಆರೋಗ್ಯ ಸಮೀಕ್ಷೆಯನ್ನು ನಡೆಸಬೇಕು. ಹೋಟೆಲ್, ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ದಂಡ ವಿಧಿಸಬೇಕು. ಕೆಲವು ಏರಿಯಾಗಳಲ್ಲಿ ಪ್ರತಿ ಬೀದಿಯಲ್ಲೂ ಕೋವಿಡ್ ಪ್ರಕರಣ ಕಂಡು ಬಂದಿವೆ. ಇಲ್ಲಿ ಕ್ಲಸ್ಟರ್ ಮಾದರಿಯಂತೆ ಸೀಲ್‌ಡೌನ್ ಮಾಡಬೇಕು. ಪಾಲಿಕೆ ಸಿಬ್ಬಂದಿ ಕಡ್ಡಾಯವಾಗಿ ಫೇಸ್‌ಶೀಲ್ಡ್ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಪ್ರತಿದಿನ ಮುಂಜಾನೆ ಹಾಗೂ ಸಂಜೆ ಸೀಲ್‌ಡೌನ್ ಪ್ರದೇಶಗಳಲ್ಲಿ ಸಂಚರಿಸಿ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳಬೇಕು.
ಪ್ರತಿ ಏರಿಯಾಗಳಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡುವಂತೆ ವ್ಯಾಪಾರಿಗಳಿಗೆ ತಿಳಿಸಬೇಕು. ಡೆಂಘೀ ಪ್ರಕರಣ ಕಂಡು ಬಂದರೆ ಫಾಗಿಂಗ್ ಮಾಡಿಸಬೇಕು. ಕೋವಿಡ್ ಪ್ರಕರಣಗಳಿರುವ ಮನೆಯಿಂದ ನಿಯಮಾನುಸಾರ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕು ಎಂದು ಸೂಕ್ತ ಕ್ರಮಗಳ ಕುರಿತು ತಿಳಿಸಿದರು.