ಹುಬ್ಬಳ್ಳಿ:ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ ಅನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೋಕಾರ್ಪಣೆಗೊಳಿಸಿದರು.
ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಲೋಕಾರ್ಪಣೆ ಬಳಿಕ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ ಅವರು, ಐತಿಹಾಸಿಕ ಮಹತ್ವ ಹೊಂದಿರುವ ಹುಬ್ಬಳ್ಳಿಯಲ್ಲಿ ಮ್ಯೂಸಿಯಂ ನಿರ್ಮಿಸಿರಿವುದು ಅತ್ಯಂತ ಸಮಂಜಸ. ಈ ಮ್ಯೂಸಿಯಂ ಮುಂಬರುವ ದಿನಗಳಲ್ಲಿ ಅತ್ಯಾಕರ್ಷಕ ಪ್ರವಾಸಿ ಕೇಂದ್ರವಾಗಲಿದೆ ಎಂದರು.
ಎಲೆಕ್ಟ್ರಿಕ್ ರೈಲು ಸಂಪರ್ಕಕ್ಕೆ ಮನವಿ:
ಹುಬ್ಬಳ್ಳಿ-ಬೆಳಗಾವಿ-ಬೆಂಗಳೂರು ನಡುವೆ ಎಲೆಕ್ಟ್ರಿಕ್ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡರು. ಇದರಿಂದ ಪ್ರಯಾಣದ ಅವಧಿಯು 8 ರಿಂದ 6 ತಾಸುಗಳಿಗೆ ಇಳಿಕೆಯಾಗಲಿದೆ. ಈ ವ್ಯವಸ್ಥೆ ಬೆಳಗಾವಿ ಮತ್ತು ಹುಬ್ಬಳ್ಳಿ ಜನರಿಗೆ ಅನುಕೂಲವಾಗಲಿದೆ ಎಂದು ಜೋಶಿ ತಿಳಿಸಿದರು.
ದೇಶದ ಅತ್ಯಂತ ಉದ್ದದ ಅಂದರೆ 1,400 ಮೀಟರ್ ಫ್ಲ್ಯಾಟ್ ಫಾರ್ಮ್ ಹೊಂದಿರುವುದು ಹುಬ್ಬಳ್ಳಿಯ ಹೆಗ್ಗಳಿಕೆಯಾಗಿದೆ. ಇದಕ್ಕೆ ಸಹಕರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ರೈಲು ದೇಶದ ಪ್ರಗತಿಯ ಎಂಜಿನ್:
ರೈಲ್ವೆ ಸಚಿವ ಪಿಯುಷ್ ಗೋಯಲ್ ಮಾತನಾಡಿ, 'ರೈಲ್ವೆಯು ಪ್ರತಿಯೊಬ್ಬ ಭಾರತೀಯನಲ್ಲೂ ಭಾವನಾತ್ಮಕ ಸಂಬಂಧ ಹೊಂದಿದೆ. ಬಹುಜನರ ಬದುಕಿನಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿ ಜೀವನ, ಉದ್ಯೋಗ, ಕೌಟುಂಬಿಕ ಪ್ರವಾಸ, ಹೋರಾಟ ಹೀಗೆ ಅನೇಕ ಮಜಲುಗಳಲ್ಲಿ ರೈಲ್ವೆ ಪಾತ್ರ ಹಿರಿದಾಗಿದೆ' ಎಂದರು.
ಹುಬ್ಬಳ್ಳಿ ಮ್ಯೂಸಿಯಂ ಕೂಡ ಅತ್ಯಾಕರ್ಷಕ ಪ್ರವಾಸಿ ತಾಣವಾಗಲಿದೆ. ಮ್ಯೂಸಿಯಂ ಇತಿಹಾಸದ ಕಥೆಗಳನ್ನು ಜನರಿಗೆ ಹೇಳುತ್ತವೆ. ಕೋವಿಡ್ ಬಳಿಕ ಹುಬ್ಬಳ್ಳಿ ಮ್ಯೂಸಿಯಂಗೆ ಭೇಟಿ ನೀಡಿ ವೀಕ್ಷಿಸುತ್ತೇನೆ ಎಂದರು.
ಇತಿಹಾಸ ಪರಿಚಯಿಸಲಿದೆ ಮ್ಯೂಸಿಯಂ - ಸುರೇಶ್ ಅಂಗಡಿ
ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ರೈಲು ಮ್ಯೂಸಿಯಂ ಹುಬ್ಬಳ್ಳಿ-ಧಾರವಾಡ ನಗರದ ಜನರಿಗೆ ದೊಡ್ಡ ಕೊಡುಗೆ. 167 ವರ್ಷಗಳ ರೈಲ್ವೆ ಇಲಾಖೆಯ ಇತಿಹಾಸ ಮತ್ತು ಬೆಳೆದುಬಂದ ಹಾದಿಯನ್ನು ಜನರಿಗೆ ಪರಿಚಯಿಸಲಿದೆ ಎಂದರು.
ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್, ಶಾಸಕರಾದ ಅಬ್ಬಯ್ಯ ಪ್ರಸಾದ್, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮತ್ತಿತರರು ಉಪಸ್ಥಿತರಿದ್ದರು.