ಹುಬ್ಬಳ್ಳಿ:ವಾಣಿಜ್ಯ ತೆರಿಗೆಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಿದ್ದಾರೆ. ಬೆಂಗಳೂರಿನಿಂದ ರಾಜಸ್ಥಾನದ ಉದಯಪುರಕ್ಕೆ ಹೊರಟಿದ್ದ ಟ್ಯಾಂಕರ್ ಪರಿಶೀಲನೆ ಮಾಡಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.
ನಕಲಿ ಜಿಎಸ್ಟಿಬಿಲ್ ಬಳಸಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧಾರದ ಮೇಲೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ವಿಜಯ ಕುಮಾರ್ ಸನದಿ ಉಪ ಆಯುಕ್ತ ಬಾಳಪ್ಪ ಸಂಪಗಾಂವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಧಾರವಾಡದ ನರೇಂದ್ರ ಟೋಲ್ ಬಳಿ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಲಕ್ಷಾಂತರ ಮೌಲ್ಯದ ಮದ್ಯದ ಬಾಟಲಿಗಳನ್ನು ನಕಲಿಬಿಲ್ ಹಾಗೂ ನಕಲಿ ಟ್ಯಾಂಕರ್ನಲ್ಲಿ ಸಾಗಾಟ ಮಾಡುತ್ತಿರುವುದು ಬಯಲಾಗಿದೆ.
ವೇಸ್ಟ್ ಆಯಿಲ್ ನೆಪದಲ್ಲಿ ಅಕ್ರಮ ಸಾರಾಯಿ ಸಾಗಾಟ ಮಾಡಲಾಗುತ್ತಿತ್ತು. ಟ್ಯಾಂಕರ್ ಪರಿಶೀಲನೆ ಮಾಡುವ ವೇಳೆ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಆಸ್ಪತ್ರೆಯಿಂದ ತಪ್ಪಿಸಿಕೊಂಡ ಆರೋಪಿ; ಮತ್ತೆ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
ಇತ್ತೀಚಿನ ಪ್ರಕರಣಗಳು-32 ಲಕ್ಷದ ಮದ್ಯ ವಶ:ಗೋವಾದಿಂದ ಹೈದರಾಬಾದ್ಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 32.06 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದ ಘಟನೆ ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದಿತ್ತು. ಮದ್ಯ ತುಂಬಿದ ಲಾರಿ ಗೋವಾದಿಂದ ಜೋಯಿಡಾ ಬಳಿ ಚೆಕ್ಪೋಸ್ಟ್ ದಾಟಿ ಹೈದರಾಬಾದ್ ಕಡೆ ತೆರಳುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ, ಸರಕು ಸಾಗಣೆ ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. 750 ಎಂಎಲ್‌ನ 24 ಬಾಟಲ್‌ಗಳಂತೆ 10 ಬಾಕ್ಸ್‌ಗಳಲ್ಲಿ 240 ಬಾಟಲ್ ರಾಯಲ್ ಸ್ಟ್ಯಾಗ್ ವಿಸ್ಕಿ ಹಾಗೂ 750 ಎಂಲ್‌ನ 24 ಬಾಟಲ್‌ಗಳಂತೆ 130 ಬಾಕ್ಸ್‌ಗಳಲ್ಲಿ 3120 ಮ್ಯಾನ್ಶನ್ ಹೌಸ್ ಫ್ರೆಂಚ್ ಬ್ರಾಂಡಿ ಬಾಟಲ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇವುಗಳ ಒಟ್ಟಾರೆ ಮೌಲ್ಯ 32,06,400 ರೂ. ಆಗಿತ್ತು.
47 ಲಕ್ಷದ ಮದ್ಯ ಜಪ್ತಿ: ಲಾರಿ ಮೂಲಕ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮದ್ಯವನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿ ಚಾಲಕನನ್ನು ಬಂಧಿಸಿದ್ದ ಘಟನೆ ವಿಜಯಪುರದ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಎಂಬಲ್ಲಿ ಇತ್ತೀಚೆಗೆ ನಡೆದಿತ್ತು. ಲಾರಿ ತಪಾಸಣೆ ನಡೆಸುದ್ದಾಗ 47.38 ಲಕ್ಷ ರೂ ಮೌಲ್ಯದ 9,108 ಲೀಟರ್ ಬಿಯರ್ ಪತ್ತೆಯಾಗಿತ್ತು. ಮಾಲು ಸಮೇತ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದರು.