ಧಾರವಾಡ :ನಗರದ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ಮೊದಲ ಬಾರಿಗೆ ಇಂಪ್ಲಾಂಟೇಬಲ್ ಕಾರ್ಡಿಯೋಓವರ್ ಡಿಫಿಬ್ರಿಲೇಟರ್(ಐಸಿಡಿ)ಯನ್ನು ಯಶಸ್ವಿಯಾಗಿ ಅವಳವಡಿಸುವ ಮೂಲಕ ಹೃದಯ ರೋಗ ಆರೈಕೆಯಲ್ಲಿ ಮತ್ತೊಂದು ಸಾಧನೆ ಮಾಡಿದೆ ಎಂದು ಹಾರ್ಟ್ ಸೆಂಟರ್ನ ಹಿರಿಯ ತಜ್ಞ ವೈದ್ಯ ಡಾ. ವಿವೇಕಾನಂದ ಗಜಪತಿ ತಿಳಿಸಿದರು.
ಐಸಿಡಿ ಅಳವಡಿಕೆ ಯಶಸ್ವಿ.. ಹೊಸ ಮೈಲುಗಲ್ಲು ಸಾಧಿಸಿದ ಎಸ್ಡಿಎಂ ಹೃದಯಾಲಯ.. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆಯ ದೀಪಕ್ ಆಮ್ಟೆ (55) ಎಂಬುವರಿಗೆ ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ದೀಪಕ್ ಅವರು ಹೆಚ್ಚಾದ ಹೃದಯ ಬಡಿತ ಹಾಗೂ ತಲೆ ತಿರುಗುವಿಕೆಯಿಂದ ಬಳಲುತ್ತಿದ್ದರು. ಪದೇಪದೇ ಈ ಸಮಸ್ಯೆ ಅವರಲ್ಲಿ ಕಂಡು ಬಂದ ಕಾರಣಕ್ಕೆ ಡಿ. 5ರಂದು ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ಸಾಮಾನ್ಯವಾಗಿ ಹೃದಯದ ಬಡಿತ ನಿಮಿಷಕ್ಕೆ 60-100 ವೇಗ ಹೊಂದಿರುತ್ತದೆ. ಆದರೆ, ದೀಪಕ್ ಹೃದಯ ಬಡಿತ 250ಕ್ಕೆ ತಲುಪಿತ್ತು. ಮೊದಲು ಬಾಹ್ಯ ಡಿಫಿಬ್ರಿಲೇಟರ್ ಶಾಕ್ ನೀಡಲಾಗಿತ್ತು. ಆದಾಗ್ಯೂ ಹೃದಯ ಬಡಿತದ ವೇಗ ತಗ್ಗದ ಕಾರಣ ಈ ಸಾಧನ ಅಳವಡಿಸಲಾಗಿದೆ.
ಹೃದಯದ ಕೋಣೆಗೆ ಹೋಗುವ ಸೀಸದೊಂದಿಗೆ ಸಾಧನ ಅಳವಡಿಸಿದ್ದು, ಅಸಹಜ ವೇಗದ ಹೃದಯ ಬಡಿತ ಪತ್ತೆ ಮಾಡಿ ಸಹಜ ಬಡಿತಕ್ಕೆ ಸಹಾಯ ಮಾಡುತ್ತದೆ. ಈ ಸಾಧನದ ಬ್ಯಾಟರಿ ಸುಮಾರು 10 ವರ್ಷಗಳವರೆಗೆ ಬಳಕೆಗೆ ಬರಲಿದ್ದು, ನಂತರದಲ್ಲಿ ಬದಲಾಯಿಸಬಹುದು ಎಂದರು.
ಮೊದಲು ತಮ್ಮ ಗ್ರಾಮದಲ್ಲೇ ಚಿಕಿತ್ಸೆ ಪಡೆದುಕೊಂಡ ದೀಪಕ್ ಆಮ್ಟೆ ಅವರನ್ನು ಆನಂತರ ಎಸ್ಡಿಎಂಗೆ ಕರೆತರಲಾಗಿತ್ತು. ಆಗ ದೀಪಕ್ ಅವರ ಹೃದಯ ನಿಮಿಷಕ್ಕೆ 250 ಬಾರಿ ಬಡಿಯುತ್ತಿದ್ದದ್ದು ತೋರಿಸಿತ್ತು. ಈ ಹಿನ್ನೆಲೆ ಅವರಿಗೆ ಬಾಹ್ಯ ಡಿಫಿಬ್ರಿಲೇಟರ್ ಶಾಕ್ ಕೊಟ್ಟು ಚಿಕಿತ್ಸೆ ನೀಡಲಾಗಿತ್ತು. ಸದ್ಯ ಎಸ್ಡಿಎಂ ಹೃದಯರೋಗ ತಜ್ಞ ಡಾ. ವಿವೇಕಾನಂದ ಗಜಪತಿಯವರು ದೀಪಕ್ ಅವರಿಗೆ ಯಶಸ್ವಿಯಾಗಿ ಐಸಿಡಿ ಅಳವಡಿಸಿದ್ದು, ಇದೀಗ ದೀಪಕ್ ಮೊದಲಿನಂತೆ ಆರಾಮಾಗಿದ್ದಾರೆ.
ಐಸಿಡಿ ಅಳವಡಿಕೆ ಚಿಕಿತ್ಸೆ ಎಂದರೇನು? :ಐಸಿಡಿ ಎನ್ನುವುದು ಬ್ಯಾಟರಿ ಚಾಲಿತ ಸಾಧನವಾಗಿದೆ. ಅದನ್ನು ಚರ್ಮದ ಅಡಿಯಲ್ಲಿ ಅಳವಡಿಸಲಾಗುತ್ತದೆ. ಅದು ರೋಗಿಯ ಹೃದಯ ಬಡಿತದ ವೇಗವನ್ನು ಸಹಜವಾಗಿರುಸುವ ಕಾರ್ಯ ನಿರ್ವಹಿಸುತ್ತದೆ.
ಅಸಹಜ ಹೃದಯ ಲಯ ಪತ್ತೆಯಾದಲ್ಲಿ ಅಂದರೆ ನಮ್ಮ ಹೃದಯವು ಅಸ್ತವ್ಯಸ್ತವಾಗಿ ಮತ್ತು ಹೆಚ್ಚು ವೇಗವಾಗಿ ಬಡಿಯುತ್ತಿದ್ದರೆ ಸಾಧಾರಣ ಹೃದಯ ಬಡಿತವನ್ನು ಪುನಃ ಸ್ಥಾಪಿಸಲು ಈ ಸಾಧನವು ಸಹಕರಿಸುತ್ತದೆ. ಧಾರವಾಡ ಎಸ್ಡಿಎಂ ಹೃದಯಾಲಯ ಹೊಸ ಮೈಲುಗಲ್ಲನ್ನು ಸಾಧಿಸುವ ಮೂಲಕ ಉತ್ತರಕರ್ನಾಟಕ ಭಾಗಕ್ಕೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತಿದೆ.