ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಧಾರವಾಡ : ಬಿಜೆಪಿಯಲ್ಲಿ ಗೌರವ ಸಿಗುತ್ತಿಲ್ಲವೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಈಗ ಅನೇಕ ಮುಖಂಡರು ಇಲ್ಲ. ಹೀಗಾಗಿ ನಾನು ಜವಾಬ್ದಾರಿ ವಹಿಸಲಿ ಅಂತಾ ಮುನೇನಕೊಪ್ಪ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಇನ್ನೊಮ್ಮೆ ಮಾತನಾಡುವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಳಗ್ಗೆ ಒಂದು ಬಾರಿ ಮುನೇನಕೊಪ್ಪ ಬಳಿ ಮಾತನಾಡಿದ್ದೇನೆ. ಇನ್ನೊಮ್ಮೆ ಅವರ ಜೊತೆ ಮಾತನಾಡುವೆ. ಅವರು ನಮ್ಮ ಪಕ್ಷದ ಅತ್ಯಂತ ಹಿರಿಯ ಮುಖಂಡರು. ಕಳೆದ ಸಲ ಜಿಲ್ಲೆಯಿಂದ 2 ವರ್ಷ ಏಕೈಕ ಸಚಿವರಾಗಿದ್ದರು. ಉಳಿದ ಎಲ್ಲರೂ ಸೇರಿ ಅವರ ಬಗ್ಗೆ ತೀರ್ಮಾನ ಮಾಡುತ್ತೇವೆ. ಜಿಲ್ಲೆಯ ಬಿಜೆಪಿ ಶಾಸಕರು ಎಲ್ಲರೂ ಸೇರಿ ಪಕ್ಷ ಮುನ್ನಡೆಸುತ್ತೇವೆ. ಮುನೇನಕೊಪ್ಪ ಅವರ ಸಲಹೆ ಸಹ ಎಲ್ಲರನ್ನೂ ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸಚಿವರಾಗಿದ್ದಾಗಲೂ ನಾಯಕರು ಮುನೇನಕೊಪ್ಪ ಅವರಿಗೆ ಮನ್ನಣೆ ಕೊಟ್ಟಿಲ್ಲವೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಆಗ ಯಾಕೆ ಆಗಿಲ್ಲ ಅನ್ನೋದು ಗೊತ್ತಿಲ್ಲ. ಅವರ ಮನಸ್ಸಿನಲ್ಲಿ ಏನಿದೆ ಅಂತಾ ಈಗ ಕೇಳುವೆ, ಅವರು ಪಕ್ಷ ಬಿಡಬಾರದು ಅಂತಾ ನಮ್ಮ ಅಪೇಕ್ಷೆ ಇದೆ. ಯಾರ ಯಾರಿಗೆ ಯಾವ ಸಮಯದಲ್ಲಿ ಮಾತನಾಡಬೇಕು. ಆಗ ಮಾತನಾಡುತ್ತಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ 23-25ರಿಂದ ಸ್ಥಾನ ಅಂತಾ ಮಾಧ್ಯಮಗಳಲ್ಲಿ ಬರುತ್ತಿದೆ. ದೇಶದಲ್ಲಿ ಮೂರನೇ ಸಲ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಅಪೇಕ್ಷೆ ಇದೆ. ಮೋದಿಯವರ ನೇತೃತ್ವ ನಮಗೆ ಇದೆ. ಕಳೆದ 60 ವರ್ಷದಲ್ಲಿ ಆಗದ ಕೆಲಸ 9 ವರ್ಷದಲ್ಲಿ ಆಗಿದೆ. ನಮ್ಮ ಕ್ಷೇತ್ರ ಸೇರಿದಂತೆ ಎಲ್ಲ ಕಡೆ ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
18-20 ಸ್ಥಾನ ಗೆಲ್ಲುತ್ತೇವೆಂದು ಕಾಂಗ್ರೆಸ್ ಹೇಳಿಕೆ ವಿಚಾರ ಮಾತನಾಡಿದ ಅವರು, ಕೆಲವರು 18-20 ಅಂತಾರೆ. ಇನ್ನೂ ಕೆಲವರು 11 ರಿಂದ 12 ಅಂತ ಹೇಳಿದ್ದಾರೆ. 2014ರಲ್ಲಿ ಸಿದ್ದರಾಮಯ್ಯ ಪೂರ್ಣ ಅವಧಿಯ ಸಿಎಂ ಆಗಿದ್ದರು. ಆಗ 25 ಸ್ಥಾನ ಗೆಲ್ಲುತ್ತೇವೆ ಎಂದಿದ್ದರು. ಆದರೆ ಆಗ 17 ಸ್ಥಾನ ಗೆದ್ದಿದ್ದೆವು. ಅದಾದ ಬಳಿಕ 25 ಸ್ಥಾನ ಗೆದ್ದಿದ್ದೆವು. ಈ ಸಲ 22 ರಿಂದ 25 ಸ್ಥಾನ ಗೆಲ್ಲುತ್ತೇವೆ ಎಂದು ಜೋಶಿ ತಿಳಿಸಿದರು.
ಶೆಟ್ಟರ್ ಬಿಜೆಪಿ ಬಿಟ್ಟ ಬಳಿಕ ಬಿಜೆಪಿ ನಾಯಕರು ವಿಚಲಿತರಾಗಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ, ನಮಗೆ ವಿಧಾನ ಸಭೆಯಲ್ಲಿ ಹಿನ್ನಡೆಯಾಗಿದೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ 4 ಸ್ಥಾನ ಗೆದ್ದಿದ್ದೇವೆ. ಜೊತೆಗೆ 60 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದೇವೆ ಎಂದು ಟಾಂಗ್ ಕೊಟ್ಟರು.
ಆಸ್ಟ್ರೇಲಿಯಾದಿಂದ ಬಂದು ಆತ್ಮಹತ್ಯೆ ಮಾಡಿಕೊಂಡ ಮೃತ ಪ್ರಿಯದರ್ಶಿನಿ ತಂದೆಯ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮನೆಗೆ ಭೇಟಿ : ಧಾರವಾಡ ಮೂಲದ ಮಹಿಳೆ ಆಸ್ಟ್ರೇಲಿಯಾದಿಂದ ಬಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯದರ್ಶಿನಿ ಪಾಟೀಲ್ ಅವರ ತಂದೆಯ ಮನೆಗೆ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿದ್ದರು. ಧಾರವಾಡ ನಗರದ ಸಪ್ತಾಪೂರ ಬಡಾವಣೆಯಲ್ಲಿರುವ ಪ್ರಿಯದರ್ಶಿನಿ ತಂದೆಯ ನಿವಾಸಕ್ಕೆ ಭೇಟಿ ನೀಡಿದ ಅವರು, ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದರು. ತನ್ನ ಇಬ್ಬರು ಮಕ್ಕಳಿಗಾಗಿ ಆಸ್ಟ್ರೇಲಿಯಾ ಸರ್ಕಾರದ ಜೊತೆ ಹೋರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದ ಜೊತೆ ಮಾತನಾಡಲು ಆಗಮಿಸಿದ್ದರು. ಮಕ್ಕಳನ್ನು ಭಾರತಕ್ಕೆ ಕರೆ ತರಲು ಪ್ರಯತ್ನ ಮಾಡುವ ಭರವಸೆ ನೀಡಿದರು.
ಭೇಟಿ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ಕೇಂದ್ರ ವಿದೇಶಾಂಗ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಕೇಂದ್ರ ಸಚಿವ ಜೈಶಂಕರ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದೇನೆ. ಸಂಪೂರ್ಣ ಮಾಹಿತಿ ವಾಟ್ಸಾಪ್ ಮೂಲಕವೂ ರವಾನಿಸಿದ್ದೇನೆ. ಪಾಲಕರಿಂದ ಸಮಗ್ರ ಮಾಹಿತಿ ಪಡೆದು ರವಾನಿಸಿದ್ದೇನೆ. ಪ್ರಿಯದರ್ಶಿನಿ ಮಕ್ಕಳು ಆಸ್ಟ್ರೇಲಿಯಾ ಸರ್ಕಾರದ ಕಸ್ಟಡಿಯಲ್ಲಿದ್ದಾರೆ. ಅವರನ್ನು ಪಾಲಕರಿಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದೇಶಿ ಕಾನೂನಿನ ಸಮಸ್ಯೆ ಇದೆ. ಹಲವಾರು ಅಡೆತಡೆಗಳಿವೆ. ಆದರೆ ಭಾರತ ಸರ್ಕಾರ ಎಲ್ಲ ರೀತಿಯ ಸಹಕಾರ ಕೊಡುತ್ತದೆ. ಆದಷ್ಟು ಬೇಗ ಮಕ್ಕಳನ್ನು ಕರೆತರುತ್ತೇವೆ, ಮಕ್ಕಳು ಸರ್ಕಾರಿ ಸುಪರ್ದಿಯಲ್ಲಿರೋದು ಕುಟುಂಬಸ್ಥರಿಗೆ ಕಳವಳ ಇದೆ. ಇದೇ ಕಳವಳದಿಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಕುಟುಂಬದ ದುಃಖ ಕಡಿಮೆ ಮಾಡಬೇಕಿದೆ. ಅದಕ್ಕಾಗಿ ಆ ಮಕ್ಕಳನ್ನು ಹಸ್ತಾಂತರ ಮಾಡಿಸಬೇಕಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.
ಕೆಲವರಿಂದ ಪ್ರಿಯದರ್ಶಿನಿ ಕುಟುಂಬಕ್ಕೆ ತೊಂದರೆ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಮಕ್ಕಳ ಬಿಡುಗಡೆಗೆ ಮೊದಲ ಆದ್ಯತೆ ಕೊಡುತ್ತೇವೆ. ಹೀಗಾಗಿ ಮಕ್ಕಳು ಸಿಗುವವರೆಗೂ ನಾವು ಬೇರೆ ವಿಚಾರ ಮಾತನಾಡುವುದಿಲ್ಲ. ಅಲ್ಲಿ ಮಕ್ಕಳ ಪೋಷಣೆ ಬಗ್ಗೆ ಕಾನೂನಿಗಳಿವೆ. ಮನೆಯಲ್ಲಿ ಮಕ್ಕಳು ಅತ್ತಿದ್ದನ್ನೇ ಇಟ್ಟುಕೊಂಡು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಯಾರೋ ದೂರು ನೀಡಿದ್ದಕ್ಕೆ ಸರ್ಕಾರ ಕಸ್ಟಡಿಗೆ ತೆಗೆದುಕೊಂಡಿದೆ. ತಂದೆ ತಾಯಿಗೆ ಮಕ್ಕಳ ಬಗ್ಗೆ ಅಪಾರ ಪ್ರೀತಿ ಇತ್ತು. ಆದರೆ ತಪ್ಪು ಕಲ್ಪನೆಯಿಂದ ಹೀಗೆ ಆಗಿದೆ. ಇವರು ಮೊದಲೇ ನಮ್ಮನ್ನು ಸಂಪರ್ಕಿಸಬೇಕಿತ್ತು. ಇದರಿಂದ ಪ್ರಿಯದರ್ಶಿನಿ ಜೀವ ಉಳಿಸಬಹುದಾಗಿತ್ತು. ಆದರೆ ಈಗ ಘಟನೆ ಆಗಿ ಹೋಗಿದೆ. ಈಗ ಆಗಬೇಕಿರುವ ಕಾರ್ಯ ಮಾಡಬೇಕಿದೆ ಎಂದು ಸಚಿವ ಜೋಶಿ ಹೇಳಿದರು.
ಇದನ್ನೂ ಓದಿ :ನನಗೆ ಕಾಂಗ್ರೆಸ್ನಿಂದ ಯಾವುದೇ ಆಹ್ವಾನ ಬಂದಿಲ್ಲ: ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ.. ಮುನೇನಕೊಪ್ಪ ಸ್ಪಷ್ಟನೆ