ಧಾರವಾಡ:ಹೋರಾಟದ ಸಂದರ್ಭದಲ್ಲಿ ನಾನು ಜೈಲಿಗೆ ಹೋಗಿದ್ದೆ. ಕಾಂಗ್ರೆಸ್ ಅಭ್ಯರ್ಥಿಯಂತೆ ನಾನಲ್ಲ. ಅವರು ಕೊಲೆ ಕೇಸ್ ಸಂಬಂಧಿಸಿದಂತೆ ರಾಜಿ ಮಾಡಿಸಲು ಜೈಲಿಗೆ ಹೋಗಿದ್ದರು. ಹಿಂದೆ ಈದ್ಗಾ ವಿವಾದದ ವೇಳೆ ನನ್ನನ್ನು 15 ದಿನ ಜೈಲಿಗೆ ಹಾಕಿದ್ದರು ಎಂದು ಸಂಸದ ಪ್ರಹ್ಲಾದ್ ಜೋಶಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಟಾಂಗ್ ನೀಡಿದ್ದಾರೆ.
ನಾನು ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದೆ: ವಿನಯ್ಗೆ ಜೋಶಿ ಟಾಂಗ್ - etv bharat
ಲಾಠಿ ಏಟು ತಿಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಹೊರತು ಅವರಂತೆ ಕೊಲೆ ಕೇಸ್ನಲ್ಲಿ ಸಿಲುಕಿ ಜೈಲಿಗೆ ಹೋದವನಲ್ಲ ಎಂದು ಹಾಲಿ ಸಂಸದ ಪ್ರಹ್ಲಾದ್ ಜೋಶಿ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ಪೊಲೀಸರು ವೀರಪ್ಪ ಮೊಯ್ಲಿ ಅವರ ಮಾತು ಕೇಳಿ ನನ್ನನ್ನು ಜೈಲಿಗೆ ಹಾಕಿದ್ದರು. ಆದರೆ, ನಾನು ರಾಜಿ ಮಾಡಿಸಲು ಜೈಲಿಗೆ ಹೋಗಿಲ್ಲ, ರಾಷ್ಟ್ರ ಧ್ವಜದ ಹೋರಾಟದಲ್ಲಿ ಜೈಲಿಗೆ ಹೋಗಿದ್ದೆ. ಆಗಲೇ ಜನ ನನ್ನ ನಾಯಕತ್ವ ಗುರುತಿಸಿದರು. ಹೀಗಾಗಿ ಮೂರು ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಪೊಲೀಸರು ನಮ್ಮನ್ನು ಲಾಠಿಯಿಂದ ಹೊಡೆದಿದ್ದಕ್ಕೆ ಬಿಜೆಪಿ ಅಷ್ಟು ಗಟ್ಟಿಯಾಗಿದೆ ಎಂದರು.
ಶೃತಿ ಬೆಳ್ಳಕ್ಕಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಪ್ರಕರಣ ಸೈಬರ್ ಕ್ರೈಂ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಈ ಪ್ರಕರಣವನ್ನು ಅವರಿಗೆ ವಹಿಸಬೇಕಿತ್ತು. ಎಸ್ಪಿ ಯಾವ ಅಧಿಕಾರದ ಮೇಲೆ ಅವರನ್ನು ಬಂಧಿಸಿದ್ದಾರೆ ಗೊತ್ತಿಲ್ಲ. ಎಂ.ಬಿ.ಪಾಟೀಲ್ ಒತ್ತಡಕ್ಕೆ ಮಣಿದು ಹೀಗೆಲ್ಲ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.