ನಾನು ಡಿಪ್ರೆಶನ್ಗೆ ಹೋಗುವ ಪ್ರಶ್ನೆಇಲ್ಲ. ಬೇರೆಯವರನ್ನು ಡಿಪ್ರೆಶನ್ ಮಾಡುತ್ತೇನೆ ಹುಬ್ಬಳ್ಳಿ :ಈ ಬಾರಿಯ ಚುನಾವಣೆ ಸೋಲು ಎಂಬುವುದು ಫೈನಲ್ ಅಲ್ಲ. ಶೆಟ್ಟರ್ ಸೋತರೇ ಡಿಪ್ರೆಶನ್ ಹೋಗುತ್ತಾರೆ ಎಂದು ಕೆಲವರು ಮಾತನಾಡಿದ್ದಾರೆ. ಆದರೆ ಶೆಟ್ಟರ್ ಡಿಪ್ರೆಶನ್ ಹೋಗುವುದಿಲ್ಲ. ಬೇರೆಯವರನ್ನು ಡಿಪ್ರೆಶನ್ಗೆ ಕಳಿಸುತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
ಇಂದು ಹುಬ್ಬಳ್ಳಿಯ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಚುನಾವಣಾ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಯಿಂದ ನಮ್ಮ ತಂದೆಯವರು ಸಹ 3 ಬಾರಿ ಚುನಾಚವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದರು. ಹೀಗಾಗಿ 3 ಸೋಲು ಕಂಡಿರುವ ಕುಟುಂಬ ನಮ್ಮದು. ನಾನು ಚುನಾವಣೆಯಲ್ಲಿ ವೈಯಕ್ತಿಕವಾಗಿ ಎಂದಿಗೂ ಸೋತಿಲ್ಲ. ಆದರೆ, ನಮ್ಮ ಕುಟುಂಬಕ್ಕೆ ಸೋತಿರುವ ಅನುಭವ ಕೂಡ ಇದೆ. ಇದಕ್ಕಾಗಿ ಕೆಲವರು ಹೇಳಿದರು ಶೆಟ್ಟರ್ ಚುನಾವಣೆಯಲ್ಲಿ ಸೋತರೆ ಡಿಪ್ರೆಶನ್ ಹೋಗುತ್ತಾರೆ ಎಂದು, ಆದರೇ ನಾನು ಡಿಪ್ರೆಶನ್ಗೆ ಹೋಗುವ ಪ್ರಶ್ನೆಇಲ್ಲ. ಬೇರೆಯವರನ್ನು ಡಿಪ್ರೆಶನ್ ಮಾಡುತ್ತೇನೆ ಎಂದು ವಿರೋಧ ಪಕ್ಷಕ್ಕೆ ಟಾಂಗ್ ಕೊಟ್ಟರು.
ಒಂದು ಟೈಮ್ನಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರು, ಮಕ್ಕಳು ಎಲ್ಲರೂ ಕೂಡ ಚುನಾವಣೆಯಲ್ಲಿ ಸೋತಿದ್ದರು. ಆದರೆ, ಹೆಚ್.ಡಿ ದೇವೇಗೌಡ ಅವರಿಗೆ ಮಹತ್ವ ಹಾಗೆಯೇ ಇದೆ. ಚುನಾವಣೆಯಲ್ಲಿ ಸೋತಿದ್ದರೇ ಎಂದು ಯಾರನ್ನು ಕಡೆಗಣಿಸುವಂತಿಲ್ಲ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಿಂದೆ ಕೂಡ ಎರಡು ಬಾರಿ ಸೋತು ಸಿಎಂ ಆದವರು. ಅದರಂತೆ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಹಲವರು ಸೋತ ಬಳಿಕವೇ ಮತ್ತಷ್ಟು ಪ್ರವರ್ದಮಾನಕ್ಕೆ ಬಂದವರು ಎಂದು ಉದಾಹರಣೆಯನ್ನೂ ನೀಡಿದರು.
ಮುಂದೆ ಬಹಳಷ್ಟು ಚುನಾವಣೆಗಳು ಬರಲಿದ್ದು, ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಚುನಾವಣೆ ಘೋಷಣೆಯಾದರೆ ಬಹುತೇಕ ಜಿಲ್ಲಾ, ತಾಲೂಕು ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಈ ಹಿಂದೆ ಲೋಕಸಭಾ ಚುನಾವಣೆ ಬಗ್ಗೆ ಗಂಭೀರವಾಗಿ ಆಲೋಚಿಸಿ ಇಡೀ ರಾಜ್ಯದ 25 ಸೀಟುಗಳಲ್ಲಿ ಬಿಜೆಪಿ ಗೆದ್ದಿತ್ತು. ಮುಂದಿನ ಚುನಾವಣೆಯಲ್ಲಿ ಅದು ಉಲ್ಟಾ ಆಗಲಿದೆ ಎಂದು ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು .
ರಾಜ್ಯ ವಿಧಾನಸಭೆ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ಹಣದ ಪ್ರಭಾವದಿಂದ ಬಿಜೆಪಿ ಚುನಾವಣೆಯಲ್ಲಿ ಗೆದ್ದಿತು. ನಾನು ಯಾವುದೇ ಸಂದರ್ಭದಲ್ಲಿ ಹಣ ಹಂಚಿದ್ದಿಲ್ಲ. ಹೀಗಾಗಿ ಹಣ ಬಲ ಜೊತೆಗೆ ಒತ್ತಡ ತಂದರು. ಜನ ಬಿಜೆಪಿ ಮೈಂಡ್ ಸೆಟ್ ನಿಂದ ಹೊರ ಬರುವುದಕ್ಕೆ ಸ್ವಲ್ಪ ಟೈಮ್ ಬೇಕಾಗುತ್ತೆ. ಒಂದೆರಡು ತಿಂಗಳಲ್ಲಿ ಜನರ ಮೈಂಡ್ ಸೆಟ್ ಬದಲಾಗಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಚುನಾವಣೆ ಸಂದರ್ಭಗಳಲ್ಲಿ ಆದ ತಪ್ಪುಗಳನ್ನು ಸರಿಮಾಡಿಕೊಂಡು ಹೋದರೆ ಬರುವ ಯಾವುದೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಮುಂದಿನ ಹಲವಾರು ಚುನಾವಣೆಗಳಲ್ಲಿ ಅಗ್ನಿ ಪರೀಕ್ಷೆ ಎದುರಿಸೋಣ. ಐದು ಗ್ಯಾರಂಟಿ ಕೊಟ್ಟ ಪಕ್ಷ ಕಾಂಗ್ರೆಸ್ ಆಗಿದ್ದು, ಪ್ರತಿಪಕ್ಷಗಳು ಈಗಾಗಲೇ ಕೂಗೆಬ್ಬಿಸಿವೆ. ಘೋಷಣೆ ಮಾಡಿರುವ ಐದರ ಪೈಕಿ ಕನಿಷ್ಠ ಮೂರು ಗ್ಯಾರಂಟಿ ಜಾರಿಗೆ ತಂದರೇ ಲೋಕಸಭೆಯಲ್ಲಿ ಗೆಲುವು ಖಚಿತ. ಗ್ಯಾರಂಟಿ ಜಾರಿಗೆ ಸಮಯಾವಕಾಶ ಬೇಕಾಗುತ್ತೆ. ಖಂಡಿತಾ ಸಿದ್ದರಾಮಯ್ಯ ಗ್ಯಾರಂಟಿಗಳನ್ನು ಜಾರಿಗೆ ತರುವ ವಿಶ್ವಾಸವಿದೆ. ಜೊತೆಗೆ ಇಡೀ ರಾಜ್ಯದಲ್ಲಿ ನಾನು ಕಾಂಗ್ರೆಸ್ ಸಂಘಟನೆಗೆ ಸಿದ್ಧನಿದ್ದೇನೆ. ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಇದನ್ನೂ ಓದಿ :ಆಡಳಿತ ಸುಗಮವಾಗಲೂ ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕು: ಸಚಿವ ಸತೀಶ ಜಾರಕಿಹೊಳಿ