'ಸನಾತನ ಧರ್ಮದ ವಿಚಾರವಾಗಿ ನಾನು ಮಾತನಾಡಿಲ್ಲ' ಹುಬ್ಬಳ್ಳಿ :ಸನಾತನ ಧರ್ಮದ ವಿಚಾರವಾಗಿ ನಾನು ಮಾತನಾಡಿಲ್ಲ. ಬೇರೆಯವರು ಏನೋ ವಿಶ್ಲೇಷಣೆ ಮಾಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ನಾನು ಆ ಸಮಯ, ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ನಮ್ಮ ಅಭಿಪ್ರಾಯವದು. ಯಾರು ಏನು ಬೇಕಾದರೂ ವಿಶ್ಲೇಷಣೆ ಮಾಡಲಿ, ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾನು ಹೇಳಿರುವ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಸನಾತನ ಧರ್ಮದ ವಿಚಾರವಾಗಿ ಮಾತಾಡಿದ್ದಾರೆ. ಈ ವಿಚಾರ ಬಿಟ್ಟು ಅಭಿವೃದ್ದಿ ಕುರಿತಂತೆ, ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಳಿ ಎಂದರು.
ಬಿಜೆಪಿಯವರ ಹೋರಾಟವನ್ನು ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಯಾರು ಕಾನೂನಿನ ವಿರುದ್ದ ಕೆಲಸ ಮಾಡುತ್ತಾರೋ, ಯಾರು ಕಾನೂನಿಗೆ ವಿರುದ್ದವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೋ ಅಂಥವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ. ಬಿಜೆಪಿಯವರಿಗೆ ಬೇರೆ ಕಾನೂನಿದೆಯೇ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಹೋರಾಟ ಮಾಡಲಿ, ನಾವು ಉತ್ತರ ಕೊಡುತ್ತೇವೆ. ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ಮತ್ತೊಮ್ಮೆ ಉತ್ತರ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬರಗಾಲದ ಬಗ್ಗೆ ಚರ್ಚೆಯಾಗಿದೆ. ರಾಜ್ಯದ ಕೆಲವು ತಾಲೂಕುಗಳನ್ನು ಗುರುತಿಸಲಾಗಿದೆ. ಶೀಘ್ರವೇ ಬರಗಾಲ ಘೋಷಣೆ ಮಾಡಲಾಗುವುದು. ಕೇಂದ್ರಕ್ಕೂ ವರದಿ ಕಳುಹಿಸುತ್ತೇವೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
'ಹಿಂದೂ ಧರ್ಮ ಯಾವಾಗ ಹುಟ್ಟಿತು?': ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶದಲ್ಲಿ ಬೌದ್ಧ ಮತ್ತು ಜೈನ ಧರ್ಮ ಹುಟ್ಟಿರುವಂತಹ ಇತಿಹಾಸವಿದೆ. ಆದರೆ ಹಿಂದೂ ಧರ್ಮ ಯಾವಾಗ ಹುಟ್ಟಿತು?. ಯಾರು ಹುಟ್ಟಿಸಿದರು? ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ವಿದೇಶದಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ನಮ್ಮ ದೇಶಕ್ಕೆ ಬಂದಿವೆ. ಪ್ರಪಂಚದ ಎಲ್ಲಾ ಧರ್ಮಗಳ ಸಾರಾಂಶ ಒಂದೇ, ಅದು ಮನುಕುಲಕ್ಕೆ ಒಳ್ಳೆಯದಾಗಲಿ ಎಂಬುದು ಎಂದು ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹೇಳಿಕೆ ವಿಚಾರವಾಗಿ ಬಾಗಲಕೋಟೆಯಲ್ಲಿ ಸೆ.6 ರಂದು ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪರಮೇಶ್ವರ್ ಅವರು ತಮ್ಮ ತಂದೆ ಮತ್ತು ತಾತನ ಹೆಸರು ಹೇಳಬಹುದು. ಮುತ್ತಜ್ಜನ ಹೆಸರು ಹೇಳಲಿ ನೋಡೋಣ? ಮೂರನೇ ತಲೆಮಾರಿನ ಹೆಸರೇ ನಿಮಗೆ ಗೊತ್ತಿಲ್ಲ. ಅಂತಹದರಲ್ಲಿ ನೂರಾರು ವರ್ಷಗಳ ಇತಿಹಾಸ ಇರುವ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಇದು ಸರಿ ಅಲ್ಲ. ನೀವು ರಾಜ್ಯದ ಗೃಹ ಸಚಿವರು. ಮೇಲಾಗಿ ವೈದ್ಯರು, ಈ ರೀತಿ ಪ್ರಶ್ನೆ ಕೇಳುವಂತಹ ಅವಕಾಶ ನಿಮ್ಮಲ್ಲಿ ಬರಬಾರದು ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ :ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರು: ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರಶ್ನೆ