ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರ ಜೊತೆ ಪ್ರತಿಕ್ರಿಯೆ ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಕ್ಷೇತ್ರ ಹುಬ್ಬಳ್ಳಿ-ಧಾರವಾಡದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.
ವಸಂತ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿಯಾದರೂ ಬಿಜೆಪಿಯಿಂದ ನಾನೇ ಅಭ್ಯರ್ಥಿ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ ಸಂತೋಷ. ಅವರ ಸ್ಪರ್ಧೆಯಿಂದ ನನಗೇನೂ ಭಯವಿಲ್ಲ. ಅದು ಅವರ ಪಾರ್ಟಿಯ ನಿರ್ಧಾರ ಎಂದರು.
ಸಂಸತ್ ಮೇಲಿನ ದಾಳಿಗೆ ನಿರುದ್ಯೋಗ ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ಚೈಲ್ಡಿಶ್ ಆಗಿದೆ. ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚೆಯಾಗಲಿ, ಬೇಡ ಅನ್ನಲ್ಲ. ಆದರೆ ನಿರುದ್ಯೋಗ ಇದೆ ಅಂತ ಹೇಳಿ ಕೊಲೆ ಮಾಡುತ್ತೇನೆ, ಸಂಸದರನ್ನು ಕೊಲೆ ಮಾಡುತ್ತೇನೆ ಎಂದರೆ ಒಪ್ಪಲು ಸಾಧ್ಯವೇ?. ಕರ್ನಾಟಕದಲ್ಲಿ ನಿರುದ್ಯೋಗ ಇಲ್ಲವೇ? ಛತ್ತೀಸ್‌ಗಢ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಇತ್ತು. ಅಲ್ಲಿ ನಿರುದ್ಯೋಗ ಇಲ್ಲವೇ? ನಿರುದ್ಯೋಗ ಇದೆ ಅಂತ ದೇಶವಿರೋಧಿ, ಟೆರರಿಸ್ಟ್‌ಗಳ ಜೊತೆ ಲಿಂಕ್ ಇಟ್ಟುಕೊಳ್ಳುತ್ತೇವೆಯೇ. ಇಂತಹ ಕೃತ್ಯವೆಸಗಲು ನಿಮ್ಮ ಬೆಂಬಲ ಇದೆಯೇ ಎಂದು ರಾಹುಲ್ ಗಾಂಧಿ ಅವರನ್ನು ಜೋಶಿ ಪ್ರಶ್ನಿಸಿದರು.
ಕೊಲೆ ಮಾಡಿದವನಿಗೆ ಅವನದ್ದೇ ಲಾಜಿಕ್ ಇರುತ್ತದೆ. ಆದರೆ ಇದನ್ನು ಸಮಾಜ ಒಪ್ಪುತ್ತದೆಯೇ? ರಾಹುಲ್ ಗಾಂಧಿ ಚೈಲ್ಡಿಶ್ ಆಗಿ ಮಾತನಾಡುತ್ತಿದ್ದಾರೆ. ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ರಾಷ್ಟ್ರದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದರು.
ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 330 ಸ್ಥಾನ:ಮೋದಿ ಜನಪ್ರಿಯತೆಯೇನು, ಕಾಂಗ್ರೆಸ್ ಜನಪ್ರಿಯತೆಯೇನು ಅಂತ ಜನ ನೋಡಿದ್ದಾರೆ. ರಾಹುಲ್ ಗಾಂಧಿ ತೆಲಂಗಾಣದಲ್ಲಿ ಓಡಾಡಿದ್ದರೆ ಕಾಂಗ್ರೆಸ್ ಸೋಲುತ್ತಿತ್ತು. ಮೋದಿ ಜನಪ್ರಿಯತೆಯ ಕಾರಣದಿಂದ ನಾವು ಎಲ್ಲೆಡೆ ಗೆದ್ದಿದ್ದೇವೆ. ಲೋಕಸಭೆ ಚುನಾವಣೆ ಕುರಿತಂತೆ ಎಲ್ಲ ಸರ್ವೆಗಳು ಬಿಜೆಪಿ ನೇತೃತ್ವದ ಮೈತ್ರಿಕೂಟ 330 ಸ್ಥಾನಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಅಂತ ಹೇಳ್ತಿವೆ ಎಂದು ಹೇಳಿದರು.
ಬೆಳಗಾವಿ ಘಟನೆಗೆ ಪ್ರತಿಕ್ರಿಯೆ:ಬೆಳಗಾವಿ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಸಿಎಂ ಆರೋಪಕ್ಕೆ, ಸಿದ್ದರಾಮಯ್ಯನವರು ಈ ಘಟನೆಯನ್ನು ಇತರೆ ರಾಜ್ಯದ ಘಟನೆಗಳಿಗೆ ಹೋಲಿಸಬಾರದು. ಮಣಿಪುರ ಘಟನೆಗೂ ಬೆಳಗಾವಿಗೂ ಅಜಗಜಾಂತರ ವ್ಯತ್ಯಾಸವಿದೆ. ದೇಶ ಸ್ವಾತಂತ್ರ್ಯ ಬಂದಾಗಿನಿಂದ ಹಾಗೂ ಬರುವ ಮುನ್ನ ಎಥ್ನಿಕ್ ವಯಲೆನ್ಸ್ ನಡೆಯುತ್ತಿದೆ. ಮಣಿಪುರ ಘಟನೆಯಾದ ಮೇಲೂ ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿಲ್ಲ. ಹಿಂದೆ ಇಂತಹ ಘಟನೆಯಾದಾಗ ಒಬ್ಬೇ ಒಬ್ಬ ಗೃಹಸಚಿವ ಮಣಿಪುರಕ್ಕೆ ಹೋಗಿರಲಿಲ್ಲ. ಅಮಿತ್ ಷಾ ಮೂರು ದಿನ ಹೋಗಿ ಅಲ್ಲಿಯೇ ಇದ್ದರು ಎಂದರು.
ವಿದ್ಯಾರ್ಥಿಗಳಿಂದ ಮಲ ಸ್ವಚ್ಛತೆ ಘಟನೆ: ಕೋಲಾರದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೂಲಕ ಮಲ ಶುಚಿಗೊಳಿಸಿದ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ ಪ್ರಹ್ಲಾದ್ ಜೋಶಿ, ಸರ್ಕಾರ ಬೆಳಗಾವಿ ಪ್ರಕರಣ, ಕೋಲಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸಿಎಂ ಮತ್ತು ಮಂತ್ರಿಗಳು ಯಾವಾಗ ಕ್ಯಾಶುವಲ್ ಆಗಿರ್ತಾರೋ ಆಗ ಅಧಿಕಾರಿಗಳು ಗಂಭೀರವಾಗಿ ಇರೋದಿಲ್ಲ. ಅದಕ್ಕೆ ಇಂತಹ ಸ್ಥಿತಿ ಆಗಿದೆ ಎಂದು ಆರೋಪಿಸಿದರು.
ಇದನ್ನೂಓದಿ:ಡಿ.21ರಂದು ಸಿಡಬ್ಲ್ಯೂಸಿ ಸಭೆ ಕರೆದ ಖರ್ಗೆ; ಲೋಕಸಭಾ ಚುನಾವಣಾ ಕಾರ್ಯತಂತ್ರ ಚರ್ಚೆ ಸಾಧ್ಯತೆ