ಧಾರವಾಡ : ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಬೇಕು ಎಂದರೆ ಅವರದ್ದೇ ಆದ ವೈಯಕ್ತಿಕ ಹಿತಾಸಕ್ತಿ ಇರಬೇಕು. ಸಚಿವರು, ಶಾಸಕರು, ಸೋತ ಶಾಸಕರು ಅಥವಾ ಪ್ರಬಲ ಆಕಾಂಕ್ಷಿಗಳಲ್ಲಿ ಯಾರು ಗೆಲ್ಲುತ್ತಾರೋ ಅಂತವರನ್ನು ಪಕ್ಷ ಗುರುತಿಸಿ ಟಿಕೆಟ್ ಕೊಡುತ್ತದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನನಗೆ ವೈಯಕ್ತಿಕವಾಗಿ ಲೋಕಸಭೆ ಚುನಾವಣೆಗೆ ನಿಲ್ಲಲು ಆಸಕ್ತಿ ಇಲ್ಲ. ಧಾರವಾಡ ಜಿಲ್ಲೆಯಲ್ಲಿ 15 ಜನ ಅಭ್ಯರ್ಥಿಗಳು ಅರ್ಜಿ ಕೊಟ್ಟಿದ್ದಾರೆ. ಯಾವ ಶಾಸಕರೂ ಅರ್ಜಿ ನೀಡಿಲ್ಲ, ಹೆಬ್ಬಾಳ್ಕರ್ ಅವರು ಇಲ್ಲಿಗೆ ಬಂದು ಅರ್ಜಿ ತೆಗೆದುಕೊಂಡು ಹೋಗಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಮತ್ತ್ಯಾರು ಅರ್ಜಿ ನೀಡಿದ್ದಾರೋ ಗೊತ್ತಿಲ್ಲ, ಬೇರೆ ಪಕ್ಷದಿಂದ ಬರುವವರೂ ಇರುತ್ತಾರೆ. ಎಷ್ಟು ಅರ್ಜಿಗಳು ಬಂದಿವೆ ಎಂಬುದನ್ನು ಪರಿಗಣಿಸುತ್ತೇವೆ. ಎಲ್ಲವನ್ನು ಪರಿಶೀಲಿಸಿ ಟಿಕೆಟ್ ನೀಡಲಾಗುತ್ತದೆ" ಎಂದರು.
ಮುನೇನಕೊಪ್ಪ ಕಾಂಗ್ರೆಸ್ ಸೇರುವ ವಿಚಾರಕ್ಕೆ ಮಾತನಾಡಿದ ಅವರು, ಮುನೇನಕೊಪ್ಪ ಅವರು ನೇರವಾಗಿ ನನ್ನ ಸಂಪರ್ಕದಲ್ಲಿಲ್ಲ, ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಮಾಹಿತಿ ಇದೆ. ಅವರು ಬಂದರೆ ಸ್ವಾಗತ ಮಾಡುತ್ತೇವೆ. ರಾಹುಲ್ ಗಾಂಧಿ ದೇಶದ ಎಲ್ಲ ಭಾಗದ ಯುವಕರ ಜೊತೆ ಸಂಪರ್ಕದಲ್ಲಿದ್ದಾರೆ. ಪಕ್ಷ ಗೆಲ್ಲಿಸಬೇಕು ಎಂಬ ಛಲ ಇದೆ. ನನ್ನ ಜೊತೆ ಮುಖಂಡರು, ಕಾರ್ಯಕರ್ತರು ಇದ್ದಾರೆ. ಕಳೆದ ಐದು ಬಾರಿ ಇಲ್ಲಿ ನಾವು ಸೋತಿದ್ದೇವೆ, ಈ ಬಾರಿ ಗಂಭೀರವಾಗಿ ಚುನಾವಣೆ ಮಾಡುತ್ತೇವೆ. ಒಗ್ಗಟ್ಟಿನಿಂದ ಇಲ್ಲಿ ಕೆಲಸ ಮಾಡುತ್ತೇವೆ, ಎಲ್ಲ ಸಮಾಜದವರು ಟಿಕೆಟ್ ಕೇಳುತ್ತಾರೆ. ಕೊನೆಗೆ ಯಾರಿಗೆ ಕೊಡಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಸುವರ್ಣಸೌಧದ ಎದುರು ಮದ್ಯಪ್ರಿಯರಿಂದ ನಡೆದ ಪ್ರತಿಭಟನೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಅವರ ಬೇಡಿಕೆ ನ್ಯಾಯಯುತವಾದದ್ದು, ಮದ್ಯದ ಬಾಟಲಿ ಮೇಲೆ ಇನ್ಶೂರೆನ್ಸ್ ಮಾಡಿಸಬೇಕು ಎಂದಿದ್ದನ್ನು ಪರಿಗಣಿಸಬಹುದು. ಇನ್ಶೂರೆನ್ಸ್ ಮಾಡುವುದರಿಂದ ಎರಡೂ ಕಡೆ ಲಾಭ ಆಗುತ್ತದೆ. ಇದೊಂದು ಚರ್ಚೆ ಮಾಡುವಂತಹ ವಿಷಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಂಬಂಧಪಟ್ಟ ಇಲಾಖೆ ಜೊತೆಗೆ ಚರ್ಚೆ ನಡೆಯಲಿದೆ. ಇದೊಂದು ಒಳ್ಳೆಯ ಸಲಹೆ ಎಂದು ನಗುತ್ತಲೇ ಉತ್ತರ ಕೊಟ್ಟರು.