ಹುಬ್ಬಳ್ಳಿ: ಈತ ಓದಿದ್ದು ಇಂಜಿನಿಯರಿಂಗ್ ಪದವಿ. ಆದ್ರೆ ಯುಪಿಎಸ್ಸಿ ಪರೀಕ್ಷೆ (UPSC) ಬರೆದಿದ್ದು ಮಾತ್ರ ಕನ್ನಡದಲ್ಲಿ. ಆಂಗ್ಲ ಮಾಧ್ಯಮದಲ್ಲಿ ಓದಿದ್ರೂ ಕೂಡ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿಸಿಕೊಂಡು ಐದನೇ ಪ್ರಯತ್ನದಲ್ಲಿ ಹುಬ್ಬಳ್ಳಿಯ ಶ್ರೀನಿವಾಸ್ ಎಂ.ಪಿ 235ನೇ ರ್‍ಯಾಂಕ್ ಪಡೆದಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ನಿವಾಸಿಯಾಗಿರುವ ಶ್ರೀನಿವಾಸ್ ಪೋಷಕರು ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕದಲ್ಲಿ ಲಕ್ಷಾಂತರ ರೂ. ಸಂಬಳ ಬರುವ ನೌಕರಿ ಬಿಟ್ಟು ಬಂದು ಸಾಧನೆ ಮಾಡುವ ಮೂಲಕ ಶ್ರೀನಿವಾಸ್ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.
ಐಚ್ಛಿಕ ವಿಷಯವಾಗಿ ಕನ್ನಡ ಆಯ್ಕೆ:
ಇಂಜಿನಿಯರಿಂಗ್ ಓದಿದ್ದ ಶ್ರೀನಿವಾಸ್ ಕನ್ನಡವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಮೊದಲು ಗಣಿತ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದ ಶ್ರೀನಿವಾಸ್, ನಿರೀಕ್ಷಿತ ಫಲಿತಾಂಶ ಬಾರದ ಹಿನ್ನಲೆಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕೊನೆಗೂ ಮಾತೃಭಾಷೆ ಆಯ್ಕೆ ಮಾಡಿಕೊಳ್ಳುವ ಮೂಲಕ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿದ್ದಾರೆ.
ಅಮೆರಿಕದಲ್ಲಿ ಸಿಕ್ಕ ನೌಕರಿ ಬಿಟ್ಟು ಹುಟ್ಟೂರಿನಲ್ಲಿ ಸಾಧನೆ :
ಶ್ರೀನಿವಾಸ್ ತಂದೆ ಪ್ರಸನ್ನ, ನೈರುತ್ಯ ರೈಲ್ವೆ ವಿಭಾಗದಲ್ಲಿ ರೈಲ್ವೆ ಎಕ್ಸ್ಪ್ರೆಸ್ ಗಾರ್ಡ್ ಆಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಚಿನ್ಮಯಿ ವಿದ್ಯಾಲಯದಲ್ಲಿ ಪೂರೈಸಿದ್ದ ಶ್ರೀನಿವಾಸ್, ಹೈದರಾಬಾದ್ನಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದರು. ನಂತರ ಅಮೆರಿಕದಲ್ಲಿ ಫೈನಾನ್ಸ್ ಮ್ಯಾನೇಜ್ಮೆಂಟ್ ಕೋರ್ಸ್ ಪೂರೈಸಿ, ಖಾಸಗಿ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾರೆ. ಆದರೆ ಯುಪಿಎಸ್‌ಸಿಯಲ್ಲಿ ಸಾಧನೆ ಮಾಡಬೇಕೆಂಬ ಹಠದೊಂದಿಗೆ ತಾಯ್ನಾಡಿಗೆ ಮರಳಿದ ಶ್ರೀನಿವಾಸ್, 2016 ರಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆದಿದ್ದರು.