ಹುಬ್ಬಳ್ಳಿ: ಲಂಡನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿಯ ನವನಗರದ ನಿವಾಸಿ ಗದಿಗೆಪ್ಪ ಗೌಡರ್ ಪಾಟೀಲ್ ಮೃತದೇಹ ಲಂಡನ್ನಿಂದ ಬೆಂಗಳೂರಿಗೆ ನಿನ್ನೆ ತಡರಾತ್ರಿ ಆಗಮಿಸಿದೆ.
ಆದರೆ ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೇ ಟೆಕ್ಕಿ ಅಂತ್ಯಕ್ರಿಯೆ ನಡೆಸಲು ಸಂಬಂಧಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮಾರ್ಚ್ 13 ರಂದು ಲಂಡನ್ನಲ್ಲಿ ಗದಿಗೆಪ್ಪ ಗೌಡರ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ 59 ದಿನಗಳಿಂದ ಲಂಡನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಗನ ಅಂತ್ಯ ಸಂಸ್ಕಾರವನನ್ನು ಹುಬ್ಬಳ್ಳಿಯಲ್ಲೇ ಮಾಡಲು ಮೃತನ ತಂದೆ ತಾಯಿಗಳ ಇಚ್ಚಿಸಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಸತತ ಪ್ರಯತ್ನದಿಂದ ನಿನ್ನೆ ತಡರಾತ್ರಿ ಬೆಂಗಳೂರಿಗರ ಟೆಕ್ಕಿ ಮೃತದೇಹ ಆಗಮಿಸಿದೆ.
ಇಂದು ಹುಬ್ಬಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಟೆಕ್ಕಿ ತಂದೆ ತಾಯಿ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಮೃತದೇಹದ ಜೊತೆಗೆ ಲಂಡನ್ನಿಂದ ಪತ್ನಿ, ಹಾಗೂ ಮಕ್ಕಳು ಆಗಮಿಸಿದ್ದು, ಅವರನ್ನು ಬೆಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಹುಬ್ಬಳ್ಳಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಇಂದು ಬೆಂಗಳೂರಿನಲ್ಲಿಯೇ ಟೆಕ್ಕಿಯ ಅಂತ್ಯಕ್ರಿಯೆ ನೆರವೇರಿಸಲು ಟೆಕ್ಕಿಯ ಸಂಬಂಧಿಕರೆಲ್ಲರೂ ಹೊರಟ್ಟಿದ್ದು, ಇಂದು ಸಾಯಂಕಾಲದೊಳಗೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.