ಕರ್ನಾಟಕ

karnataka

By

Published : Sep 3, 2020, 9:38 PM IST

ETV Bharat / state

ಹು-ಧಾ ಸ್ಮಾರ್ಟ್‌ ಸಿಟಿ ಯೋಜನೆಗೆ ಆನೆ ಬಲ; ಬಳಕೆಯಾಗದ ಅನುದಾನಕ್ಕೆ ಬಂತು 47 ಕೋಟಿ ರೂ. ಬಡ್ಡಿ!

ಹುಬ್ಬಳ್ಳಿ-ಧಾರವಾಡ ಮಹಾನಗರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 196 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 190 ಕೋಟಿ ರೂ. ಬಿಡುಗಡೆ ಮಾಡಿವೆ. ಇಲ್ಲಿ ಆರಂಭಿಕ ಹಂತದಲ್ಲಿ ಖರ್ಚಾಗಿ ಉಳಿದಿರುವ ಅನುದಾನ 268 ಕೋಟಿ ರೂ.ವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿತ್ತು. ಸದ್ಯ ಈ ಠೇವಣಿ ಹಣಕ್ಕೆ ಬ್ಯಾಂಕಿನಿಂದ ಬಂದಿರುವ 47 ಕೋಟಿ ಬಡ್ಡಿ ಸೇರಿ, ಈಗ ಬರೋಬ್ಬರಿ ಒಟ್ಟು 315 ಕೋಟಿ ರೂ. ಆಗಿದೆ.

Hubli Smart city
ಹುಬ್ಬಳ್ಳಿ

ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಮತ್ತಷ್ಟು ಅಭಿವೃದ್ಧಿ ಕಾಣುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಈಗ ಸ್ಮಾರ್ಟ್ ಸಿಟಿಯ ಅನುದಾನವೇ ಸ್ಮಾರ್ಟ್​ ಸಿಟಿ ಯೋಜನೆಗೆ ಆನೆ ಬಲ ತಂದಿದೆ.

ಹೌದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಮಾರ್ಟ್‌ ಸಿಟಿ ಯೋಜನೆ ಜಾರಿಗೆ 386 ಕೋಟಿ ರೂ. ಅನುದಾನ ಬಿಡುಗಡೆ ಮಾಡಿವೆ. ವಿವಿಧ ಕಾಮಗಾರಿಗಳು ಹಾಗೂ ಆಡಳಿತಾತ್ಮಕ ವೆಚ್ಚ ಸೇರಿ 118 ಕೋಟಿ ರೂ. ಖರ್ಚಾಗಿದೆ. ಖರ್ಚಾಗಿ ಉಳಿದ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿಯಿಂದ 47 ಕೋಟಿ ರೂ. ಬಡ್ಡಿ ಬಂದಿದ್ದು, ಸ್ಮಾರ್ಟ್ ಸಿಟಿ ಯೋಜನೆಗೆ ಮತ್ತೊಂದು ಆರ್ಥಿಕ ನೆರವು ಬಂದಂತಾಗಿದೆ.

ಸ್ಮಾರ್ಟ್​ ಸಿಟಿ ಯೋಜನೆಯ ಸದ್ಯದ ಸ್ಥಿತಿ-1

ಹು-ಧಾ ಮಹಾನಗರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 196 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 190 ಕೋಟಿ ರೂ. ಬಿಡುಗಡೆ ಮಾಡಿವೆ. ಉಳಿದಿರುವ ಅನುದಾನ 268 ಕೋಟಿ ರೂ.ಗೆ ಬ್ಯಾಂಕಿನಿಂದ ಬಂದಿರುವ 47 ಕೋಟಿ ಬಡ್ಡಿ ಸೇರಿ, ಈಗ ಬರೋಬ್ಬರಿ ಒಟ್ಟು 315 ಕೋಟಿ ರೂ. ಆಗಿದೆ. ಅದರಲ್ಲಿ 300 ಕೋಟಿ ಮೊತ್ತವನ್ನು ಠೇವಣಿಯಾಗಿ ಬ್ಯಾಂಕಿನಲ್ಲಿಡಲಾಗಿದೆ.

ಇದುವರೆಗೂ 11 ಯೋಜನೆಗಳ ಪೈಕಿ 118 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳಿಗಾಗಿ 98 ಕೋಟಿ ರೂ. ಖರ್ಚಾಗಿದ್ದರೆ, ಯೋಜನೆ ರೂಪಿಸುತ್ತಿರುವ ಪಿಡಬ್ಲ್ಯುಸಿ ಕಂಪನಿಗೆ 10 ಕೋಟಿ ರೂ. ಪಾವತಿಸಲಾಗಿದೆ. ಉಳಿದಂತೆ ಆಡಳಿತಾತ್ಮಕ ವೆಚ್ಚವಾಗಿ 10 ಕೋಟಿ ರೂ. ಖರ್ಚಾಗಿದೆ.

ಸ್ಮಾರ್ಟ್​ ಸಿಟಿ ಯೋಜನೆಯ ಸದ್ಯದ ಸ್ಥಿತಿ-2

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿರುವುದರಿಂದ ಇತ್ತೀಚೆಗೆ ಬಿಡುಗಡೆ ಮಾಡಿದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಗೆ 5ನೇ ಸ್ಥಾನ ಲಭಿಸಿದೆ. ಅವಳಿ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಜಾರಿಯಾಗಿ ಮೂರು ವರ್ಷಗಳೇ ಆಗಿದ್ದರೂ, ಮೂರು ಯೋಜನೆಗಳು ಡಿಪಿಆರ್‌ ಹಂತದಲ್ಲಿವೆ. ವಿದ್ಯುತ್‌ ಚಿತಾಗಾರ ನಿರ್ಮಾಣ, ಸೋಲಾರ್‌ ರೂಫ್‌ ಟಾಪ್‌ ಅಳವಡಿಕೆ ಸೇರಿದಂತೆ ಹಲವು ಕಾಮಗಾರಿಗಳ ಟೆಂಡರ್‌ನಲ್ಲಿ ಗುತ್ತಿಗೆದಾರರು ಭಾಗವಹಿಸುತ್ತಿಲ್ಲ.

ಸ್ಮಾರ್ಟ್ ಸಿಟಿ ಎಂಡಿ ಎಸ್ ಹೆಚ್ ನರೇಗಲ್​ರಿಂದ ಮಾಹಿತಿ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡ ಹಲವಾರು ಕಾಮಗಾರಿಗಳನ್ನು ಜನಪ್ರತಿನಿಧಿಗಳು ಬದಲಾಯಿಸುವಂತೆ ಸೂಚಿಸುತ್ತಿರುವುದರಿಂದಲೂ ಯೋಜನೆಗಳ ಜಾರಿಯಲ್ಲಿ ವಿಳಂಬವಾಗುತ್ತಿದೆ. ಕೊರೊನಾ ಸೋಂಕಿನ ಹರಡುವಿಕೆ ಕಾರಣದಿಂದಲೂ ಕಾರ್ಮಿಕರ ಕೊರತೆ ಕಾಮಗಾರಿಗಳಿಗೆ ಎದುರಾಗಿದೆ.

ಸ್ಮಾರ್ಟ್​ ಸಿಟಿ ಯೋಜನೆಯ ಸದ್ಯದ ಸ್ಥಿತಿ-3

ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅನುದಾನ ಬಳಕೆಯಾಗದೇ ಇದ್ದರೂ ಕೂಡ ದೊಡ್ಡ ಮೊತ್ತದ ಬಡ್ಡಿಯನ್ನು ನೀಡಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಕ್ಕೆ ಆರ್ಥಿಕ ಶಕ್ತಿ ದೊರೆಯಲಿದೆ.

ABOUT THE AUTHOR

...view details