ಹುಬ್ಬಳ್ಳಿ :ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕಳಪೆ ಸಾಧನೆ ತೋರಿದ ರಾಜ್ಯದ 9 ಎಡಿಸಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ರಾಜ್ಯದ 9 ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕಳಪೆ ಸಾಧನೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಶೇ. 40ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 2021ರ ಡಿಸೆಂಬರ್ ಅಂತ್ಯಕ್ಕೆ ಬಳ್ಳಾರಿ, ಯಾದಗಿರಿ, ಕಲಬುರಗಿ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ಮಂಡ್ಯ, ಕೊಪ್ಪಳ ಮತ್ತು ಧಾರವಾಡ ಜಿಲ್ಲೆಗಳು ಕಡಿಮೆ ಪ್ರಗತಿ ಸಾಧಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಓದಿ:ತರಬೇತಿ ವೈದ್ಯೆಗೆ ಮುತ್ತು ಕೊಟ್ಟ ಹಾಸನದ ಹಿಮ್ಸ್ ಸಹಾಯಕ ಪ್ರಾಧ್ಯಾಪಕ!?
ಈ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು ಕಡಿಮೆ ಪ್ರಗತಿ ಸಾಧಿಸಿರುವ ಕುರಿತು ಒಂದು ವಾರದೊಳಗೆ ಸೂಕ್ತ ಸಮಜಾಯಿಷಿ ನೀಡಲು ಸೂಚಿಸಿದ್ದಾರೆ. ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆಗಳ ಸಹಿತ ಸಮಜಾಯಿಷಿ ನೀಡದಿದ್ದರೆ ಶಿಸ್ತು ಕ್ರಮಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆರೋಪ ಪಟ್ಟಿಗಳ ಸಹಿತ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರಾಜ್ಯದ ಎಲ್ಲ ಶಾಸಕರಿಗೆ ವಾರ್ಷಿಕ 2 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿರುತ್ತದೆ. ಅದರಲ್ಲಿ ರಸ್ತೆ, ದೇವಸ್ಥಾನ ನಿರ್ಮಾಣ ಮತ್ತು ಜೀರ್ಣೋದ್ಧಾರ, ಅಂಗನವಾಡಿ, ಸಮುದಾಯ ಭವನ ನಿರ್ಮಾಣ, ಯುಜಿಡಿ ಕಾಮಗಾರಿ, ಉದ್ಯಾನ, ಸ್ಮಶಾನ, ಕೆರೆ, ನಾಲಾ ಅಭಿವೃದ್ಧಿ, ಕುಡಿಯುವ ನೀರು ಮತ್ತು ಪೈಪ್‌ಲೈನ್ ವ್ಯವಸ್ಥೆಗಳಂತಹ ಸಾರ್ವಜನಿಕ ಮೂಲಸೌಕರ್ಯ ಕಲ್ಪಿಸಲು ಶಾಸಕರು ಈ ಅನುದಾನ ವಿನಿಯೋಗಿಸಿಕೊಳ್ಳಬೇಕು. ವರ್ಷಕ್ಕೆ ನಿಗದಿಪಡಿಸಿದ 2 ಕೋಟಿ ರೂಪಾಯಿ ಆಯಾ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿರುತ್ತದೆ.
ಓದಿ:ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕ
ಜಿಲ್ಲಾ ಪಂಚಾಯತ್, ನಿರ್ಮಿತಿ ಕೇಂದ್ರ ಹಾಗೂ ಲೋಕೋಪಯೋಗಿ ಸೇರಿ ಇತರ ಇಲಾಖೆಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಇದರ ಉಸ್ತುವಾರಿ ಅಪರ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ. ವಿನಿಯೋಗಿಸಿಕೊಳ್ಳಬಹುದಾದ ಅನುದಾನವನ್ನು 9 ಜಿಲ್ಲೆಗಳ ಶಾಸಕರು ಬಳಸಿಕೊಳ್ಳುವಲ್ಲಿ ವಿಫಲರಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳು ಶಾಸಕರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ