ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಆಯುಕ್ತರಾಗಿ ಲಾಭೂರಾಮ್ ಆಗಮಿಸಿದ ಮೇಲೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವಳಿನಗರದ ಕ್ರಿಮಿನಲ್ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಲ್ಲದೆ ತಮ್ಮ ಸಿಬ್ಬಂದಿ ಕೆಲಸ ಕಾರ್ಯಗಳಲ್ಲಿ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ನಗರದ ಹಲವು ಠಾಣೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಠಿಕಾಣಿ ಹೂಡಿರುವ ಖಾಕಿ ಪಡೆಗೆ ಚುರುಕು ಮುಟ್ಟಿಸಲು ಈಗ ಮುಂದಾಗಿದ್ದಾರೆ. ಒಂದೇ ಠಾಣೆಯಲ್ಲಿ ಕನಿಷ್ಠ ನಾಲ್ಕು ವರ್ಷ ಹಾಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಬಗ್ಗೆ ಮಾಹಿತಿ ಕೇಳಿದ್ದಾರೆ.
ಪೊಲೀಸ್ ಕಮಿಷನರ್ ಲಾಭೂರಾಮ್ ಪತ್ರ ಅವಳಿ ನಗರದ ಎಲ್ಲಾ ಠಾಣೆಗಳ ಇನ್ಸ್ಪೆಕ್ಟರ್ ಎಸಿಪಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ನಿನ್ನೆಯೇ ಎಲ್ಲಾ ಠಾಣೆಗಳ ಸಿಬ್ಬಂದಿಯ ಮಾಹಿತಿ ನೀಡಲು ಕಮಿಷನರ್ ಗಡುವು ನೀಡಿದ್ದಾರೆ. ಆ ಮೂಲಕ ಜಿಡ್ಡುಗಟ್ಟಿದ್ದ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ.
ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಾ ದಂಧೆಗೆ ಪ್ರಭಾವ ಬೀರುತ್ತಿರುವುದು ಕಮಿಷನರ್ ಗಮನಕ್ಕೆ ಬಂದಿದೆ ಎನ್ನಲಾಗ್ತಿದೆ. ಹೀಗಾಗಿ ಇದಕ್ಕೆ ಇತಿಶ್ರೀ ಹಾಡಲು ಪೊಲೀಸ್ ಕಮಿಷನರ್ ಲಾಭೂರಾಮ್ ಮುಂದಾಗಿದ್ದಾರೆ. ಕಮಿಷನರ್ ಅವರ ಈ ಕ್ರಮ ಅವಳಿ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಠಿಕಾಣಿ ಹೂಡಿ ತಾವು ಆಡಿದ್ದೇ ಆಟ ಎಂದು ಮೆರೆಯುತ್ತಿದ್ದ ಕೆಲ ಸಿಬ್ಬಂದಿಗೆ ನಿದ್ದೆಗೆಡಿಸಿದೆ.